ಬೆಂಗಳೂರು: ತರಹೇವಾರಿ ಸ್ವಾದದ ಕಾಫಿಯನ್ನು ಕಾಫಿಪ್ರಿಯರು ಆಸ್ವಾದಿಸಿದರು. ನಗರದ ಚಾಮರ ವಜ್ರ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಅಂತರರಾಷ್ಟ್ರೀಯ ಕಾಫಿ ಉತ್ಸವವು ಕಾಫಿ ಘಮ ಹರಡಿತು.
ಸ್ಪೆಷಾಲಿಟಿ ಕಾಫಿ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್‌ಸಿಎಐ) ಸಂಸ್ಥೆಯು ಭಾರತೀಯ ಕಾಫಿ ಮಂಡಳಿಯ ಸಹಕಾರದೊಂದಿಗೆ ಆಯೋಜಿಸಿರುವ ಮೂರು ದಿನಗಳ ‘ಭಾರತ–ಅಂತರರಾಷ್ಟ್ರೀಯ ಕಾಫಿ ಉತ್ಸವ–2025’ದಲ್ಲಿ ವಿವಿಧ ಕಾಫಿ ಬೆಳೆಗಾರರ ಸಂಘಗಳು, ಕಾಫಿ ಉತ್ಪಾದಕರು, ಕಾಫಿ ಕೆಫೆ ಕಂಪನಿಗಳು ಕಾಫಿ ಉತ್ಪಾದನಾ ಯಂತ್ರಗಳಿಗೆ ಸಂಬಂಧಿಸಿದ 80ಕ್ಕೂ ಅಧಿಕ ಮಳಿಗೆಗಳು ಭಾಗವಹಿಸಿದ್ದವು.
ಮನೆ ಹಾಗೂ ವಾಣಿಜ್ಯ ಬಳಕೆಗೆ ಸಹಕಾರಿಯಾದ ಕಾಫಿ ಯಂತ್ರಗಳನ್ನು ವೀಕ್ಷಿಸಿದ ಕಾಫಿಪ್ರಿಯರು ಸ್ಥಳದಲ್ಲಿಯೇ ಸಿದ್ಧಪಡಿಸುತ್ತಿದ್ದ ಕಾಫಿಯನ್ನು ಸವಿದು, ಕಾಫಿ ಪುಡಿ ಖರೀದಿಸಿದರು.
ಕಾಫಿ ಬೆಳೆ, ಮಾರುಕಟ್ಟೆ, ರಫ್ತು ಉತ್ತೇಜನ ಮತ್ತು ಮೌಲ್ಯವರ್ಧನೆ ಕುರಿತಾದ ಸಂಶೋಧನೆಗಳು ಮತ್ತು ಚರ್ಚೆಗಳಿಗೆ ಉತ್ಸವದಲ್ಲಿ ಚಾಲನೆ ನೀಡಲಾಯಿತು.
ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್, ಕಾರ್ಯದರ್ಶಿ ಕೆ.ಜಿ. ಜಗದೀಶ್, ಮಂಡಳಿಯ ಹಣಕಾಸು ವಿಭಾಗದ ನಿರ್ದೇಶಕ ಎನ್.ಎನ್. ನರೇಂದ್ರ, ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸದರ್ನ್ ಇಂಡಿಯಾ ಅಧ್ಯಕ್ಷ ಮ್ಯಾಥ್ಯು ಅಬ್ರಹಾಂ, ಸ್ಪೆಷಲ್ ಕಾಫಿ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್‌ಸಿಎಐ) ಅಧ್ಯಕ್ಷ ಡಿ.ಎಂ.ಪೂರ್ಣೇಶ್, ಕಾರ್ಯದರ್ಶಿ ಎಸ್. ಅಪ್ಪಾದೊರೈ, ಕೋಶಾಧಿಕಾರಿ ಹಂಸಿನಿ, ವಿವಿಧ ಕಂಪನಿಗಳ ಎನ್. ವಿಶ್ವನಾಥ್, ವಿಕ್ರಂ ಖುರಾನಾ, ಶ್ರೀಕಾಂತ್ ಅವರು ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಏ.27ರವರೆಗೆ 15 ಕಾರ್ಯಾಗಾರಗಳು ನಡೆಯಲಿವೆ. ಕಾಫಿ ಉತ್ಸವಕ್ಕೆ ಶುಲ್ಕ ನಿಗದಿಪಡಿಸಲಾಗಿದೆ.
ಗಮನ ಸೆಳೆದ ‘ವಿಸ್ಕಿ ಕಾಫಿ’ ಬೀಜ
ವಿವಿಧ ಫ್ಲೇವರ್‌ಗಳ ಸಿರಪ್‌ಗಳನ್ನು ಉತ್ಸವದಲ್ಲಿ ಆಕರ್ಷಕವಾಗಿ ಜೋಡಿಸಿಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.