ADVERTISEMENT

ಚೀನಾವನ್ನು ರಾಜತಾಂತ್ರಿಕವಾಗಿಯೇ ಎದುರಿಸಬೇಕು: ಜಿ. ಪಾರ್ಥಸಾರಥಿ

ಪಾಕಿಸ್ತಾನದಲ್ಲಿನ ಭಾರತದ ಮಾಜಿ ಹೈಕಮಿಷನರ್‌ ಜಿ. ಪಾರ್ಥಸಾರಥಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 20:14 IST
Last Updated 24 ಅಕ್ಟೋಬರ್ 2021, 20:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಚೀನಾದ ಜತೆಗಿನ ಗಡಿ ವಿವಾದಗಳಿಗೆ ರಾಜತಾಂತ್ರಿಕ ಮಾರ್ಗದ ಮೂಲಕವೇ ಪರಿಹಾರ ಕಂಡುಕೊಳ್ಳಲು ಭಾರತವು ಪ್ರಬಲ ಪ್ರಯತ್ನ ನಡೆಸಬೇಕು ಎಂದು ಪಾಕಿಸ್ತಾನದಲ್ಲಿನ ಭಾರತದ ಮಾಜಿ ಹೈಕಮಿಷನರ್‌ ಜಿ. ಪಾರ್ಥಸಾರಥಿ ಸಲಹೆ ನೀಡಿದರು.

ವಾಯುಪಡೆಯ ಯಲಹಂಕ ವಾಯುನೆಲೆಯಲ್ಲಿ ಭಾನುವಾರ ಮುಕ್ತಾಯವಾದ ‘ಸ್ವರ್ಣಿಮ ವಿಜಯ ವರ್ಷ’ ಸಂಭ್ರಮಾಚರಣೆಯ ಕೊನೆಯ ದಿನ ‘ಪ್ರಾದೇಶಿಕ ಭದ್ರತಾ ಆದ್ಯತೆಗಳು’ ಕುರಿತು ಮಾತನಾಡಿದ ಅವರು, ‘ಚೀನಾ ತನ್ನ ಸುತ್ತಲಿನ ಎಲ್ಲ ರಾಷ್ಟ್ರಗಳ ಜತೆಗೂ ಗಡಿ ವ್ಯಾಜ್ಯ ಹೊಂದಿದೆ. ಆಕ್ರಮಣಕಾರಿ ನಿಲುವನ್ನು ಪ್ರದರ್ಶಿಸುತ್ತಿರುವ ಅದನ್ನು ರಾಜತಾಂತ್ರಿಕವಾಗಿಯೇ ಎದುರಿಸುವುದಕ್ಕೆ ಆದ್ಯತೆ ನೀಡಬೇಕು’ ಎಂದರು.

ಭಾರತದ ಪಾಲಿಗೆ ಪಾಕಿಸ್ತಾನ ಯಾವಾಗಲೂ ಒಂದು ಸವಾಲು. ಆದರೆ, ಚೀನಾ ಒಂದು ವಿಶಿಷ್ಟ ಸವಾಲು. ರಾಜತಾಂತ್ರಿಕವಾಗಿ ಲಭ್ಯವಿರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದೇ ಇದ್ದರೆ ಚೀನಾದ ಜತೆಗಿನ ಸಮಸ್ಯೆ ಶಾಶ್ವತವಾಗಿ ಉಳಿಯುವ ಅಪಾಯವಿದೆ. ಚೀನಾದ ಆಕ್ರಮಣಕಾರಿ ನಿಲುವು ಸುತ್ತಲಿನ ಎಲ್ಲ ರಾಷ್ಟ್ರಗಳ ಪಾಲಿಗೂ ಆತಂಕಕಾರಿಯಾಗಿಯೇ ಇದೆ ಎಂದು ಹೇಳಿದರು.

ADVERTISEMENT

‘ಬಾಂಗ್ಲಾದೇಶದ ಜತೆಗಿನ ಭೂ ವಿವಾದದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಸೋಲಾಯಿತು. ಆ ತೀರ್ಪನ್ನು ನಮ್ಮ ರಾಷ್ಟ್ರ ಒಪ್ಪಿಕೊಂಡಿತು. ಆದರೆ, ಫಿಲಿಫೈನ್ಸ್‌ ಜತೆಗಿನ ಭೂ ವಿವಾದದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯ ನೀಡಿದ ತೀರ್ಪನ್ನು ಚೀನಾ ಗೌರವಿಸಲೇ ಇಲ್ಲ. ಇದು ಆ ರಾಷ್ಟ್ರದ ಅತಿಕ್ರಮಣಕಾರಿ ನಿಲುವಿಗೆ ಉದಾಹರಣೆ’ ಎಂದರು.

ಚೀನಾ ಆರ್ಥಿಕವಾಗಿ ಬಲಿಷ್ಠವಾಗಿರುವ ದೇಶ. ಭಾರತದ ಆರ್ಥಿಕ ಸ್ಥಿತಿ ಆ ರೀತಿ ಇಲ್ಲ. ಆ ದೃಷ್ಟಿಯಿಂದಲೂ ಯೋಚಿಸಬೇಕಾಗಿದೆ. ನೆರೆಯ ರಾಷ್ಟ್ರಗಳ ಜತೆಗೆ ಸ್ನೇಹಯುತ ಸಂಬಂಧ, ಮಾತುಕತೆಯ ಮಾರ್ಗವನ್ನು ಆಯ್ದುಕೊಳ್ಳುವುದು ಉತ್ತಮ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.