ADVERTISEMENT

‘ಸಂವಿಧಾನಕ್ಕೆ ಧಕ್ಕೆಯಾದರೆ ಹೋರಾಟ’

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 23:24 IST
Last Updated 29 ಡಿಸೆಂಬರ್ 2019, 23:24 IST
ಚಂದ್ರಕಾಂತ ಬಿಜ್ಜರಗಿ, ಡಾ.ವಿಜಯಲಕ್ಷ್ಮೀ ಪರಮೇಶ್, ಐ.ಎಚ್.ಸಂಗಮದೇವ್, ಶಿವಹೊನ್ನಯ್ಯ ಅವರನ್ನು ಈಶ್ವರಾನಂದ ಪುರಿ ಸ್ವಾಮೀಜಿ ಸನ್ಮಾನಿಸಿದರು.
ಚಂದ್ರಕಾಂತ ಬಿಜ್ಜರಗಿ, ಡಾ.ವಿಜಯಲಕ್ಷ್ಮೀ ಪರಮೇಶ್, ಐ.ಎಚ್.ಸಂಗಮದೇವ್, ಶಿವಹೊನ್ನಯ್ಯ ಅವರನ್ನು ಈಶ್ವರಾನಂದ ಪುರಿ ಸ್ವಾಮೀಜಿ ಸನ್ಮಾನಿಸಿದರು.   

ಕೆಂಗೇರಿ: ‘ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯಾದರೆ ಸಮುದಾಯದೊಂದಿಗೆ ಬೀದಿಗಿಳಿದು ಹೋರಾಟ ನಡೆಸುತ್ತೇನೆ’ ಎಂದು ಕಾಗಿನೆಲೆ ಕನಕಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಎಚ್ಚರಿಸಿದರು.

ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿ ವತಿಯಿಂದ ಸೊಣ್ಣೇನಹಳ್ಳಿಯ ಕನಕಶ್ರೀ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕನಕದಾಸರ 532ನೇ ಜಯಂತ್ಯುತ್ಸವ ಹಾಗೂ ಸಮಿತಿಯ ರಜತ ಮಹೋತ್ಸವದಲ್ಲಿ ಮಾತನಾಡಿದರು.

‘ಸಮಾಜದ ಹಲವು ಸ್ತರಗಳಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಮೇಲ್ಜಾತಿಯವರಿಗೆ ಸಂವಿಧಾನ ರಚಿಸುವ ಅವಕಾಶ ದೊರೆತಿದ್ದರೆ ಮನುಸ್ಮೃತಿಯೇ ಮತ್ತೊಮ್ಮೆ ಸಂವಿಧಾನವನ್ನು ಆಕ್ರಮಿಸುವ ಸಂಭವವಿತ್ತು’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಹಲವು ದೇವಾಲಯಗಳಲ್ಲಿ ಮೇಲಂಗಿಯನ್ನು ತೆಗೆದು ದೇವರ ದರ್ಶನ ಮಾಡುವ ಪರಿಪಾಠವಿದೆ. ಇದೊಂದು ಧಾರ್ಮಿಕ ಶೋಷಣೆಯಾಗಿದ್ದು, ಜಾತಿಯನ್ನು ಅರಿಯಲು ಮಾಡಿಕೊಂಡ ಆಚರಣೆಯಾಗಿದೆ. ಇದರಲ್ಲಿ ಮತ್ತ್ಯಾವ ಪುರುಷಾರ್ಥವೂ ಇಲ್ಲ’ ಎಂದರು.

ಬೆಂಗಳೂರು ಡಯಾಬಿಟಿಕ್ ಸೆಂಟರ್‌ನ ಡಾ.ವಿಜಯಲಕ್ಷ್ಮೀ ಪರಮೇಶ್, ‘ಕೆಎಎಸ್ ಹಾಗೂ ಐಎಎಸ್‍ನಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಮಾದರಿಯಲ್ಲೇ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಬೇಕು ಹಾಗೂ ಆರ್ಥಿಕ ನೆರವು ಒದಗಿಸಬೇಕು’ ಎಂದರು.

ಲೇಖಕ ಚಂದ್ರಕಾಂತ ಬಿಜ್ಜರಗಿ, ಬೆಂಗಳೂರು ಡಯಾಬಿಟಿಕ್ ಸೆಂಟರ್‌ನ ಡಾ.ವಿಜಯಲಕ್ಷ್ಮೀ ಪರಮೇಶ್, ಪತ್ರಕರ್ತ ಐ.ಎಚ್.ಸಂಗಮದೇವ್, ಕ್ರೀಡಾಪಟು ಶಿವಹೊನ್ನಯ್ಯ ಅವರನ್ನು ಸನ್ಮಾನಿಸಲಾಯಿತು. ಕನಕಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ಬಿ.ಬಳಗಾವಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕ ಕೆ.ರೇವಣಪ್ಪ, ಸಂಘದ ಅಧ್ಯಕ್ಷ ಪಿ.ಎನ್.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಶಿಧರ್, ಖಜಾಂಚಿ ಸಿ.ತಮ್ಮಣ್ಣ, ಆರ್.ಪಿ.ಎಸ್ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.