ಬೆಂಗಳೂರು: ‘ಭಾರತೀಯ ಸಂಸ್ಕೃತಿ ಎಂದರೆ ವೈದಿಕ ಸಂಸ್ಕೃತಿಯೊಂದೇ ಅಲ್ಲ. ಬುಡಕಟ್ಟು ಸಹಿತ ಎಲ್ಲ ಸಮುದಾಯಗಳ ಸಂಸ್ಕೃತಿ ಸೇರಿರುವುದೇ ಭಾರತೀಯ ಸಂಸ್ಕೃತಿ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ನಾಟಕ ಶಾಲೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಜಂಟಿಯಾಗಿ ಹಮ್ಮಿಕೊಂಡಿರುವ ‘ಭಾರತ ರಂಗ ಮಹೋತ್ಸವ’ ಅಂತರರಾಷ್ಟ್ರೀಯ ನಾಟಕೋತ್ಸವದಲ್ಲಿ ಐದನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಹುಸಂಸ್ಕೃತಿಯೇ ದೇಶದ ಸಂಸ್ಕೃತಿಯಾಗಿದೆ. ಯಾವುದೇ ದೇಶದ ಶ್ರೀಮಂತಿಕೆಯನ್ನು ಆರ್ಥಿಕ ಮಾನದಂಡದಲ್ಲಿ ನೋಡದೇ ಕಲೆ, ಸಂಸ್ಕೃತಿಯ ಶ್ರೀಮಂತಿಕೆಯ ಆಧಾರದಲ್ಲಿ ಅಳೆಯಬೇಕು. ಅಂಥ ಕಲಾ ಸಂಸ್ಕೃತಿಗಳನ್ನು ಬಿಂಬಿಸುವ ಕಾರ್ಯ ರಂಗಮಹೋತ್ಸವದಲ್ಲಿ ನಡೆಯುತ್ತಿದೆ ಎಂದು ಶ್ಲಾಘಿಸಿದರು.
ಉತ್ಸವ ಗೌರವವನ್ನು ಸ್ವೀಕರಿಸಿದ ರಂಗಭೂಮಿ ಕಲಾವಿದ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ‘ಭಾರತ ರಂಗ ಮಹೋತ್ಸವವು ಭಾರತೀಯ ರಂಗಭೂಮಿಗೆ ಹೊಸ ದಿಕ್ಕನ್ನು ತೋರಿಸುತ್ತಿದೆ. ಐದು ವೇದಿಕೆಗಳಲ್ಲಿ ವಿಭಿನ್ನ ರಂಗ ಪ್ರಯೋಗಗಳನ್ನು ಮಾಡುವ ಮೂಲಕ ವೈವಿಧ್ಯವನ್ನು ಕಟ್ಟಿಕೊಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘1,800ಕ್ಕೂ ಅಧಿಕ ಕಲಾವಿದರು ಈ ರಂಗಮಹೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ರಂಗಭೂಮಿಯನ್ನು ರಂಗ ದಿಗ್ಗಜರು ಕಟ್ಟಿಹೋಗಿದ್ದು, ಕರ್ನಾಟಕದ ರಂಗಭೂಮಿಯು ಭಾರತೀಯ ರಂಗಭೂಮಿಗೆ ಮಾರ್ಗದರ್ಶನ ಮಾಡುವಷ್ಟು ಬೆಳೆದು ನಿಂತಿದೆ’ ಎಂದು ಹೇಳಿದರು.
ಚಿತ್ರ ನಿರ್ದೇಶಕ ಬಿ.ಸುರೇಶ್ ಉಪಸ್ಥಿತರಿದ್ದರು. ಜೋಗತಿ ನೃತ್ಯ, ಬಂಜಾರ ನೃತ್ಯ, ‘ರೋಮಿಯೊ ಆ್ಯಂಡ್ ಜೂಲಿಯಟ್’ ನಾಟಕ ಸಹಿತ ವಿವಿಧ ರಂಗಪ್ರಸ್ತುತಿಗಳು ಬುಧವಾರ ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.