
ಬೆಂಗಳೂರು: ಅಧ್ಯಯನದ ಪ್ರಕಾರ 25 ವರ್ಷದಲ್ಲಿ (2000–2025ರ ಅವಧಿ) ದೇಶದ ರೈತರಿಗೆ ₹111 ಲಕ್ಷ ಕೋಟಿ ನಷ್ಟವಾಗಿದೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಕೃಷಿ ಬಿಕ್ಕಟ್ಟಿನಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೃಷಿ ಸುಧಾರಣಾ ಸಮಿತಿಯ ಅಧ್ಯಕ್ಷ ದೇವಿಂದರ್ ಶರ್ಮಾ ಹೇಳಿದರು.
ರೈತರ ಆತ್ಮಹತ್ಯೆಗಳ ತಡೆ ಸಮಿತಿ ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ರೈತರ ಆತ್ಮಹತ್ಯೆ ತಡೆಯುವ ಕುರಿತು ಚರ್ಚೆ ನಡೆಸಿ ಕೃಷಿ ತಂತ್ರಜ್ಞರ, ರೈತ ನಾಯಕರ ಸಲಹೆ ಪಡೆಯಲಾಯಿತು.
2000–2016ರ ಅವಧಿಯಲ್ಲಿ ₹45 ಲಕ್ಷ ಕೋಟಿ ರೈತರಿಗೆ ನಷ್ಟವಾಗಿತ್ತು. ಇದಕ್ಕೆ ಹಲವು ಕಾರಣಗಳಿವೆ. ಈ ವಿಷಯದ ಬಗ್ಗೆ ಸಂಸತ್, ವಿಧಾನ ಮಂಡಲ, ಕೃಷಿ ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳು ಹಾಗೂ ಮಾಧ್ಯಮಗಳಲ್ಲೂ ಚರ್ಚೆ ನಡೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಅನ್ನದಾತರ ಆತ್ಮಹತ್ಯೆ ನಿಂತಿಲ್ಲ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿಯಲ್ಲಿ ಮುಂಚೂಣಿಯಲ್ಲಿರುವ ಪಂಜಾಬ್ ಹಾಗೂ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳದಲ್ಲೂ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಶೇ 3.4ರಷ್ಟು ಅನುದಾನ ನೀಡಲಾಗಿದೆ. ಕರ್ನಾಟಕದ ನೀತಿ ನಿರೂಪಕರು ಸಹ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ, ‘ರಾಜ್ಯ ಬಜೆಟ್ ಪೂರ್ವಭಾವಿ ಸಭೆಗೆ ಕೃಷಿ ತಜ್ಞರನ್ನು ಆಹ್ವಾನಿಸಿ, ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ಬೇಡಿಕೆಗಳನ್ನು ಮುಖ್ಯಮಂತ್ರಿ ಬಳಿ ಪ್ರಸ್ತಾಪಿಸಲು ಅವಕಾಶ ಕಲ್ಪಿಸಲಾಗುವುದು. ಪ್ರತಿಷ್ಠೆಗಾಗಿ ಬಡವರು, ರೈತರು ಇತ್ತೀಚಿನ ದಿನಗಳಲ್ಲಿ ಸಾಲ ಮಾಡಿ ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಮದ್ಯ ಮಾರಾಟದಿಂದಲೂ ತೊಂದರೆ ಉಂಟಾಗುತ್ತಿದ್ದು, ಸರ್ಕಾರಕ್ಕೆ ₹46 ಸಾವಿರ ಕೋಟಿ ಆದಾಯ ಬರುತ್ತದೆ ಎಂದು ಬೇರೆಯವರ ಬದುಕನ್ನು ಹಾಳು ಮಾಡುವುದು ಸರಿಯಲ್ಲ’ ಎಂದರು
ರಾಜ್ಯಸಭೆಯ ಮಾಜಿ ಸದಸ್ಯ ಎಲ್.ಹನುಮಂತಯ್ಯ, ರೈತ ನಾಯಕ ಕೆ.ಟಿ.ಗಂಗಾಧರ್, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಅಶೋಕ್ ದಳವಾಯಿ, ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ.ಎ.ಬಿ.ಪಾಟೀಲ, ರಾಜ್ಯ ಕೃಷಿ ಮಾರಾಟ ಮಂಡಳಿಯ ಮಾಜಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ ಹುಂಬರವಾಡಿ, ನಿವೃತ್ತ ಕೃಷಿ ಅಧಿಕಾರಿ ಬಿ.ಎಚ್.ಪಿಂಜಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.