ADVERTISEMENT

ಇಂದಿರಾ ಕ್ಯಾಂಟೀನ್‌ ನಿರ್ವಹಣೆ ಕಗ್ಗಂಟು

ಅನುದಾನ ಬಿಡುಗಡೆ–ಭರವಸೆ ಮರೆತ ಸರ್ಕಾರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 21:16 IST
Last Updated 20 ಅಕ್ಟೋಬರ್ 2020, 21:16 IST
ಇಂದಿರಾ ಕ್ಯಾಂಟೀನ್ ಸಂಗ್ರಹ ಚಿತ್ರ
ಇಂದಿರಾ ಕ್ಯಾಂಟೀನ್ ಸಂಗ್ರಹ ಚಿತ್ರ   

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭವಾಗಿದ್ದ ‘ಇಂದಿರಾ ಕ್ಯಾಂಟೀನ್’ ನಿರ್ವಹಣೆಗೆ ಬಿಬಿಎಂಪಿ ಬಿಕ್ಕಟ್ಟು ಎದುರಿಸುತ್ತಿದೆ.

ಎರಡು ವರ್ಷಗಳಿಂದ ಬಿಬಿಎಂಪಿ ಸ್ವಂತ ಹಣದಲ್ಲೇ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆ ಮಾಡುತ್ತಿದೆ. ಕೋವಿಡ್‌ ಕಾಣಿಸಿಕೊಂಡ ಬಳಿಕ ಬಿಬಿಎಂಪಿಯ ತೆರಿಗೆ ವರಮಾನವೂ ಕುಸಿತ ಕಂಡಿದೆ. ಇದರೆ ನಡುವೆ ಕ್ಯಾಂಟೀನ್‌ಗಳಿಗೆ ಆರ್ಥಿಕ ಸಂಪನ್ಮೂಲ ಹೊಂದಿಸಲು ಪಾಲಿಕೆ ಹೆಣಗಾಡುತ್ತಿದೆ.

2017ರ ಆ.16ರಂದು ಆರಂಭವಾದ ಈ ಯೋಜನೆ ಅಲ್ಪಾವಧಿಯಲ್ಲೇ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರ ನಿರ್ವಹಣೆಯ ಸಂಪೂರ್ಣ ವೆಚ್ಚವನ್ನು ಭರಿಸುವ ವಾಗ್ದಾನವನ್ನು ಸರ್ಕಾರ ಬಿಬಿಎಂಪಿಗೆ ನೀಡಿತ್ತು. ಆದರೆ, ಕ್ಯಾಂಟೀನ್‌ಗಳ ನಿರ್ವಹಣೆಗೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ (2019–20ನೇ ಸಾಲಿನಲ್ಲಿ ) ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಈ ಕ್ಯಾಂಟೀನ್‌ ಹೆಸರಿನ ಬಗ್ಗೆ ಬಿಜೆಪಿ ಆರಂಭದಿಂದಲೂ ತಕರಾರು ವ್ಯಕ್ತಪಡಿಸಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕ್ಯಾಂಟೀನ್‌ ನಿರ್ವಹಣೆಗೆ ಅನುದಾನ ಬಿಡುಗಡೆಗೆ ಕ್ರಮಕೈಗೊಂಡಿಲ್ಲ.

ADVERTISEMENT

‘ಹಣ ಬಿಡುಗಡೆ ಮಾಡುವಂತೆ ಕೋರಿ ಬಿಬಿಎಂಪಿಯಿಂದ ಸರ್ಕಾರಕ್ಕೆ ಈ ಹಿಂದೆ ಅನೇಕ ಬಾರಿ ಪತ್ರ ಬರೆಯಲಾಗಿದೆ. ಅದಕ್ಕೆ ತಕ್ಕ ಸ್ಪಂದನೆ ಸಿಕ್ಕಿಲ್ಲ. ಮತ್ತೊಮ್ಮೆ ಪತ್ರ ಬರೆಯುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ಯಾಂಟೀನ್‌ಗಳ ಭದ್ರತಾ ವ್ಯವಸ್ಥೆ ಹಾಗೂ ಆವರಣ ಗೋಡೆಗಳಿಗಾಗಿ 2017ರಲ್ಲಿ ₹ 24.37 ಕೋಟಿ ವೆಚ್ಚ ಮಾಡಲಾಗಿತ್ತು. ಅದನ್ನು ಭರಿಸುವಂತೆಯೂ ಬಿಬಿಎಂಪಿ ಕೋರಿತ್ತು. ಅದಕ್ಕೂ ಸರ್ಕಾರ ಸ್ಪಂದಿಸಿಲ್ಲ. 2017–18ರಲ್ಲಿ ₹ 145 ಕೋಟಿ ಹಂಚಿಕೆ ಮಾಡಿದ್ದ ಸರ್ಕಾರ ಕೇವಲ ₹ 115 ಕೋಟಿಯನ್ನು ಬಿಡುಗಡೆ ಮಾಡಿತ್ತು. 2018–19ರಲ್ಲೂ ಸರ್ಕಾರ ಹಂಚಿಕೆ ಮಾಡಿದಷ್ಟು ಅನುದಾನ ಬಿಡುಗಡೆ ಮಾಡದ ಕಾರಣ ₹ 21.66 ಕೋಟಿ ವೆಚ್ಚವನ್ನುಪಾಲಿಕೆ ಭರಿಸಿದೆ. ಇವುಗಳನ್ನೂ ಸೇರಿಸಿ, 2019–20ನೇ ಸಾಲಿನವರೆಗೆ ಸರ್ಕಾರ ₹ 210 ಕೋಟಿ ಅನುದಾನ ಬಿಡುಗಡೆ ಮಾಡಬೇಕಿದೆ.

***

ಅಂಕಿಅಂಶ

173

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸ್ಥಿರ ಇಂದಿರಾ ಕ್ಯಾಂಟೀನ್‌ಗಳು

18

ಸಂಚಾರಿ ಇಂದಿರಾ ಕ್ಯಾಂಟೀನ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.