ADVERTISEMENT

ಗ್ರಾಹಕರಿಲ್ಲದೆ ಭಣಗುಡುತ್ತಿವೆ ಇಂದಿರಾ ಕ್ಯಾಂಟೀನ್‌

ಕೋವಿಡ್‌ ಭೀತಿಯಿಂದಾಗಿ ಕ್ಯಾಂಟೀನ್‌ಗೆ ಬರಲು ಗ್ರಾಹಕರ ಹಿಂದೇಟು: ಗುತ್ತಿಗೆದಾರರಿಗೆ ಸಬ್ಸಿಡಿ ಹಣ ಪಾವತಿಸದ ಬಿಬಿಎಂಪಿ

ಜಿ.ಶಿವಕುಮಾರ
Published 5 ಫೆಬ್ರುವರಿ 2022, 18:53 IST
Last Updated 5 ಫೆಬ್ರುವರಿ 2022, 18:53 IST
ಆಜಾದ್‌ ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಬೆರಳೆಣಿಕೆಯ ಗ್ರಾಹಕರಷ್ಟೇ ಕಂಡುಬಂದರು–ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ. 
ಆಜಾದ್‌ ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಬೆರಳೆಣಿಕೆಯ ಗ್ರಾಹಕರಷ್ಟೇ ಕಂಡುಬಂದರು–ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.    

ಬೆಂಗಳೂರು: ದುಡಿಯುವ ವರ್ಗದ ಜನರ ಹಸಿವು ತಣಿಸುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳು ಈಗ ಗ್ರಾಹಕರಿಲ್ಲದೆ ಭಣಗುಡುತ್ತಿವೆ. ರುಚಿ ಹಾಗೂ ಶುಚಿಯಾದ ಆಹಾರ ಪೂರೈಸಲಾಗುತ್ತಿದ್ದರೂ ಕೋವಿಡ್‌ ಭೀತಿಯಿಂದಾಗಿ ನಾಗರಿಕರು ಕ್ಯಾಂಟೀನ್‌ಗಳತ್ತ ಸುಳಿಯುತ್ತಿಲ್ಲ.

ನಗರದಲ್ಲಿ ಕ್ಯಾಂಟೀನ್‌ಗಳನ್ನು ಆರಂಭಿಸಿದಾಗ ಪ್ರತಿನಿತ್ಯ ಆಹಾರ ಸೇವಿಸುವವರ ಸಂಖ್ಯೆ 3 ಲಕ್ಷಕ್ಕೂ ಹೆಚ್ಚಿತ್ತು. ಕೋವಿಡ್‌ ಕಾಣಿಸಿಕೊಂಡ ಬಳಿಕ ಈ ಸಂಖ್ಯೆ ಇಳಿಮುಖವಾಗುತ್ತಾ ಸಾಗಿತ್ತು. 2021ರ ಅಂತ್ಯದ ವೇಳೆಗೆ ಇದು 1 ಲಕ್ಷದ ಆಸುಪಾಸಿಗೆ ಬಂದು ನಿಂತಿದೆ.

‘ಕ್ಯಾಂಟೀನ್‌ಗಳಿಗೆ ಆಧಾರವಾಗಿದ್ದವರೇ ವಲಸೆ ಕಾರ್ಮಿಕರು. ಕೋವಿಡ್‌ ಕಾಣಿಸಿಕೊಂಡ ನಂತರ ಕಾರ್ಮಿಕರೆಲ್ಲಾ ತಮ್ಮ ಊರುಗಳಿಗೆ ಹೋಗಿದ್ದರಿಂದ ಗ್ರಾಹಕರ ಸಂಖ್ಯೆ ಕ್ಷೀಣಿಸಿತ್ತು. ಈಗ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಕ್ಯಾಂಟೀನ್‌ಗೆ ಬರುವವರ ಸಂಖ್ಯೆ ನಿಧಾನವಾಗಿ ಏರುತ್ತಿದೆ’ ಎಂದು ಹನುಮಂತನಗರ ವಾರ್ಡ್‌ ಸಂಖ್ಯೆ 155ರಲ್ಲಿ ಇರುವ ಕ್ಯಾಂಟೀನ್‌ನ ಸಿಬ್ಬಂದಿಯೊಬ್ಬರು ತಿಳಿಸಿದರು.

ADVERTISEMENT

‘ಲಾಕ್‌ಡೌನ್‌ಗೂ ಮುನ್ನ 300 ರಿಂದ 350 ಮಂದಿ ಉಪಾಹಾರ ಸೇವಿಸುತ್ತಿದ್ದರು. ಲಾಕ್‌ಡೌನ್‌ ಬಳಿಕ ಈ ಸಂಖ್ಯೆ 100 ರಿಂದ 120ಕ್ಕೆ ಇಳಿದಿತ್ತು. ಈಗ ಮತ್ತಷ್ಟು ಕಡಿಮೆಯಾಗಿದೆ. ಮಧ್ಯಾಹ್ನದ ಊಟಕ್ಕೆ 30ರಿಂದ 40 ಮಂದಿ ಬರುತ್ತಾರೆ. ರಾತ್ರಿ ಊಟಕ್ಕೆ ಬರುವವರ ಸಂಖ್ಯೆ ಕಡಿಮೆ ಇದೆ‌. ನಿತ್ಯ ಅನ್ನ–ಸಾಂಬಾರ್‌, ಮೊಸರನ್ನ, ವಾಂಗೀಬಾತ್‌, ಬಿಸಿಬೇಳೆ ಬಾತ್‌ ಹೀಗೆ ಬಗೆ ಬಗೆಯ ತಿನಿಸುಗಳನ್ನು ನೀಡುತ್ತಿದ್ದೇವೆ. ಗ್ರಾಹಕರನ್ನು ಆಕರ್ಷಿಸಲು ಬೇಳೆ, ಸಬ್ಬಕ್ಕಿ ಹೀಗೆ ವಿವಿಧ ಬಗೆಯ ಪಾಯಸವನ್ನು ಸೋಮವಾರ ಹಾಗೂ ಗುರುವಾರ ವಿತರಿಸುತ್ತಿದ್ದೇವೆ’ ಎಂದರು.

‘ಪ್ರತಿ ದಿನವೂ ಒಂದೊಂದು ಬಗೆಯ ಆಹಾರ ವಿತರಿಸಲಾಗುತ್ತದೆ. ಆಹಾರ ರುಚಿಯಾಗಿರುತ್ತದೆ. ₹10ಕ್ಕೆ ಅನ್ನ– ಸಾಂಬಾರ್‌ ಅಥವಾ ಪಲಾವ್‌, ವಾಂಗೀಬಾತ್‌ ನೀಡುತ್ತಾರೆ. ಹೊಟ್ಟೆ ತುಂಬುವಷ್ಟು ಊಟ ಕೊಡುತ್ತಾರೆ’ ಎಂದು ಹನುಮಂತನಗರ ನಿವಾಸಿ ಜಯರಾಮ್‌ ತಿಳಿಸಿದರು.

‘ಕ್ಯಾಂಟೀನ್‌ಗೆ ಬಂದು ಊಟ, ಉಪಾಹಾರ ಸೇವಿಸಲು ಕೆಲವರಿಗೆ ಸಂಕೋಚ. ಅಂತಹವರು ಇಲ್ಲಿಗೆ ಬರುವುದಿಲ್ಲ. ಆಟೊ ಚಾಲಕರು, ಕೂಲಿ ಕಾರ್ಮಿಕರಿಗೆ ಕ್ಯಾಂಟೀನ್‌ನಿಂದ ತುಂಬಾ ಅನುಕೂಲವಾಗಿದೆ. ನಾನು ಆಗಾಗ ಬಂದು ಇಲ್ಲಿ ಆಹಾರ ಸೇವಿಸಿ ಹೋಗುತ್ತೇನೆ’ ಎಂದರು.

‘ಇಂದಿರಾ ಕ್ಯಾಂಟೀನ್‌ ಶುರುವಾದ ನಂತರ ನಾನು ಬೇರೆ ಬೇರೆ ಭಾಗಗಳಲ್ಲಿರುವ ಕ್ಯಾಂಟೀನ್‌ಗೆ ಹೋಗಿ ಆಹಾರ ಸೇವಿಸುತ್ತೇನೆ. ಊಟ, ತಿಂಡಿಯೆಲ್ಲಾ ಚೆನ್ನಾಗಿರುತ್ತದೆ. ಕೆಲವೊಮ್ಮೆ ಮನೆಗೆ ಪಾರ್ಸೆಲ್‌ ಸಹ ಕೊಂಡೊಯ್ಯುತ್ತೇನೆ. ಮಕ್ಕಳು ಹಾಗೂ ಮನೆಯವರೂ ಊಟ ಮಾಡಿ ಖುಷಿಪಟ್ಟಿದ್ದು ಇದೆ’ ಎಂದು ಶ್ರೀನಗರದ ರಾಜು ಹೇಳಿದರು.

ರಾಗಿ ಮುದ್ದೆ, ಚಪಾತಿ ನೀಡಲು ಚಿಂತನೆ

‘ಈಗ ಕ್ಯಾಂಟೀನ್‌ಗಳಿಗೆ ಮೊದಲಿನಷ್ಟು ಗ್ರಾಹಕರು ಬರುತ್ತಿಲ್ಲ. ವಾರದಲ್ಲಿ ಒಂದೆರಡು ದಿನ ರಾಗಿ ಮುದ್ದೆ, ಸೊಪ್ಪಿನ ಸಾರು, ಚಪಾತಿ ಹಾಗೂ ಪಲ್ಯ ನೀಡಿದರೆಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಂಟೀನ್‌ಗಳತ್ತ ಮುಖಮಾಡಬಹುದು ಎಂಬ ಆಲೋಚನೆ ಇದೆ. ಬಿಬಿಎಂಪಿ ಅಧಿಕಾರಿಗಳ ಜೊತೆಗೂ ಈ ಕುರಿತು ಚರ್ಚಿಸಿದ್ದೇವೆ’ ಎಂದು ಷೆಫ್‌ಟಾಕ್‌ ಸಂಸ್ಥೆಯ ಗೋವಿಂದ ಪೂಜಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಂಟು ತಿಂಗಳಿನಿಂದ ನಮಗೆ ಸಬ್ಸಿಡಿ ಹಣ ಪಾವತಿಸಿಲ್ಲ. ₹20 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ಕ್ಯಾಂಟೀನ್‌ ನಿರ್ವಹಣೆ ಕಷ್ಟವಾಗಿದೆ. ಇದರಲ್ಲಿ ಒಂದಷ್ಟು ಮೊತ್ತವನ್ನಾದರೂ ಬಿಡುಗಡೆ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಕೆಲ ಯಂತ್ರೋಪಕರಣಗಳು ಹಾಳಾಗಿದ್ದು ಅವುಗಳನ್ನೂ ಸರಿಪಡಿಸಿಕೊಟ್ಟಿಲ್ಲ. ಇರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಆಹಾರ ಸಿದ್ಧಪಡಿಸಿ ಸರಬರಾಜು ಮಾಡುತ್ತಿದ್ದೇವೆ’ ಎಂದರು.

‘ಬಾಕಿ ಉಳಿಸಿಕೊಂಡಿರುವ ಹಣದ ಪೈಕಿ ಸ್ವಲ್ಪ ಮೊತ್ತವನ್ನಾದರೂ ಬಿಡುಗಡೆ ಮಾಡಿದರೆ ಆಹಾರದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಬಹುದು. ಕೆ.ಆರ್‌.ಮಾರುಕಟ್ಟೆ, ಮೆಜೆಸ್ಟಿಕ್‌ ಹೀಗೆ ಜನ ಹೆಚ್ಚು ಸೇರುವ ಪ್ರದೇಶಗಳಲ್ಲಿರುವ ಕ್ಯಾಂಟೀನ್‌ಗಳಲ್ಲಿ ಹಿಂದೆಲ್ಲಾ ನಿತ್ಯ 1,500 ರಿಂದ 2,000 ಮಂದಿ ಆಹಾರ ಸೇವಿಸುತ್ತಿದ್ದರು. ಈಗ ಅಲ್ಲಿ 700 ಮಂದಿ ಆಹಾರ ಸೇವಿಸಿದರೆ ಹೆಚ್ಚು’ ಎಂದು ಹೇಳಿದರು.

ಗುಣಮಟ್ಟದ ಆಹಾರಕ್ಕೆ ಆದ್ಯತೆ

‘ಬಡವರು ಹಾಗೂ ದುಡಿಯುವ ವರ್ಗದ ಜನರಿಗೆ ಕಡಿಮೆ ದರಕ್ಕೆ ಹೊಟ್ಟೆ ತುಂಬಾ ಊಟ ನೀಡಬೇಕೆಂಬುದು ಇಂದಿರಾ ಕ್ಯಾಂಟೀನ್‌ನ ಉದ್ದೇಶ. ಹೀಗಾಗಿ ಗುಣಮಟ್ಟದ ಆಹಾರ ಪೂರೈಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ’ ಎಂದು ಬಿಬಿಎಂಪಿ ವಿಶೇಷ ಆಯುಕ್ತರಾದ (ಹಣಕಾಸು) ತುಳಸಿ ಮದ್ದಿನೇನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.