ADVERTISEMENT

ಸಂಬಂಧಿಕರಿಬ್ಬರ ಅನುಮಾನಾಸ್ಪದ ಸಾವು

ಇಂದಿರಾನಗರ ಬಳಿಯ ಸ್ಮಶಾನದಲ್ಲಿ ಘಟನೆ * ಆತ್ಮಹತ್ಯೆ ಶಂಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 20:05 IST
Last Updated 28 ಸೆಪ್ಟೆಂಬರ್ 2019, 20:05 IST
ಮುರುಗೇಶ್‌ ಹಾಗೂ ರಾಜೇಶ್‌
ಮುರುಗೇಶ್‌ ಹಾಗೂ ರಾಜೇಶ್‌    

ಬೆಂಗಳೂರು: ಇಂದಿರಾನಗರ ಠಾಣೆ ವ್ಯಾಪ್ತಿಯಲ್ಲಿ ರಾಜೇಶ್ (42) ಹಾಗೂ ಮುರುಗೇಶ್ (39) ಎಂಬುವರು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ.

ಮಾರತ್ತಹಳ್ಳಿ ನಿವಾಸಿಗಳಾಗಿದ್ದ ರಾಜೇಶ್ ಹಾಗೂ ಮುರುಗೇಶ್ ಅವರು ದೊಮ್ಮಲೂರಿನ ಅಡುಗೆ ಅನಿಲ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರಿಬ್ಬರು ಒಂದೇ ಕುಟುಂಬದ ಅಕ್ಕ–ತಂಗಿಯನ್ನು ಮದುವೆಯಾಗಿದ್ದರು.

‘ಇಂದಿರಾನಗರ ಬಳಿಯ ಲಕ್ಷ್ಮಿಪುರ ಸಮೀಪದ ಸ್ಮಶಾನದಲ್ಲಿ ರಾಜೇಶ್ ಹಾಗೂ ಮುರುಗೇಶ್ ಶನಿವಾರ ಬೆಳಿಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಅದನ್ನು ಗಮನಿಸಿದ್ದ ಸ್ಥಳೀಯರು ಹತ್ತಿರ ಹೋಗಿ ನೋಡಿದ್ದರು. ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಉಸಿರಾಡುತ್ತಿದ್ದ ಮುರುಗೇಶ್‌ ಅವರನ್ನು ಸ್ಥಳೀಯರೇ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದರು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ವಿಷ ಕುಡಿದಿರುವ ಶಂಕೆ: ‘ರಾಜೇಶ್ ಹಾಗೂ ಮುರುಗೇಶ್ ಇಬ್ಬರೂ ಒಟ್ಟಿಗೆ ನಿತ್ಯವೂ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಶುಕ್ರವಾರ ಮನೆಯಿಂದ ಬಂದಿದ್ದ ಅವರಿಬ್ಬರು ವಾಪಸು ಹೋಗಿರಲಿಲ್ಲ. ಗಾಬರಿಗೊಂಡ ಮನೆಯವರು ಎಷ್ಟೇ ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ’ ಎಂದು ಅಧಿಕಾರಿ ತಿಳಿಸಿದರು.

‘ಅವರಿಬ್ಬರು ರಾತ್ರಿ ಸ್ಮಶಾನಕ್ಕೆ ಬಂದು ಮದ್ಯಕ್ಕೆ ವಿಷ ಬೆರೆಸಿ ಕುಡಿದಿರುವ ಅನುಮಾನವಿದೆ. ಕೆಲ ನಿಮಿಷಗಳಲ್ಲೇ ಸ್ಥಳದಲ್ಲೇ ಒದ್ದಾಡಿ ಪ್ರಜ್ಞೆ ಕಳೆದುಕೊಂಡಿರಬಹುದು. ಬೆಳಿಗ್ಗೆ ಸ್ಮಶಾನ ಬಳಿ ಹಾದು ಹೋಗುತ್ತಿದ್ದ ಸ್ಥಳೀಯರೇ ಅವರಿಬ್ಬರನ್ನು ಗಮನಿಸಿದ್ದರು’ ಎಂದು ಮಾಹಿತಿ ನೀಡಿದರು.

‘ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ವೈದ್ಯರು ವರದಿ ನೀಡಿದ ಬಳಿಕವೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ’ ಎಂದರು.

ಸಂಬಂಧಿಕರ ಹೇಳಿಕೆ ಸಂಗ್ರಹ: ‘ರಾಜೇಶ್ ಹಾಗೂ ಮುರುಗೇಶ್ ಸಾವಿನಲ್ಲಿ ಅನುಮಾನವಿರುವುದಾಗಿ ಸಂಬಂಧಿಕರು ಹೇಳಿಕೆ ನೀಡಿದ್ದಾರೆ. ಅದನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಅಧಿಕಾರಿ ಹೇಳಿದರು.

‘ಮೃತರು ನಿತ್ಯವೂ ಮನೆ ಮನೆಗೆ ಹೋಗಿ ಅಡುಗೆ ಅನಿಲ ಸಿಲಿಂಡರ್ ಕೊಟ್ಟು ಬರುತ್ತಿದ್ದರು. ಸಿಲಿಂಡರ್‌ ವಿತರಣೆ ವೇಳೆಯಲ್ಲಿ ಯಾರೊಂದಿಗಾದರೂ ಜಗಳ ಆಗಿತ್ತಾ? ಎಂಬುದನ್ನೂ ತಿಳಿದುಕೊಳ್ಳುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.