ಬೆಂಗಳೂರು: ‘ಜಯಚಾಮರಾಜೇಂದ್ರ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಪುರುಷರ ಶೌಚಾಲಯಗಳ ನವೀಕರಣ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಅನುದಾನದ ಲಭ್ಯತೆ ಅನುಸಾರ ಆಸ್ಪತ್ರೆಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು’ ಎಂದು ಸರ್ಕಾರಿ ಆಯುರ್ವೇದ ವೈದ್ಯಕೀಯ ವಿದ್ಯಾಲಯದ ಪ್ರಾಂಶುಪಾಲೆ ಡಾ. ಸುರೇಖಾ ತಿಳಿಸಿದ್ದಾರೆ.
ಈ ಆಸ್ಪತ್ರೆಯು ಮೂಲಸೌಕರ್ಯದ ಕೊರತೆ ಎದುರಿಸುತ್ತಿರುವ ಬಗ್ಗೆ ಇದೇ 16ರಂದು ‘ಪ್ರಜಾವಾಣಿ’ಯಲ್ಲಿ ‘ಮುರಿದ ಬೆಂಚು, ಸೋರುವ ಚಾವಣಿ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ಬಳಿಕ, ಆಸ್ಪತ್ರೆಯ ಚಾವಣಿ ನವೀಕರಣ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವಂತೆ ಆಯುಷ್ ಇಲಾಖೆ ಆಯುಕ್ತರಿಗೆ ಮನವಿ ಮಾಡಿರುವ ಅವರು, ‘ಅಸ್ಪತ್ರೆಯ ಚಾವಣಿ ಸೋರುತ್ತಿರುವುದು ಹಾಗೂ ಇಲ್ಲಿನ ಮೂಲಸೌಕರ್ಯಗಳ ಕೊರತೆ ಬಗ್ಗೆ ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಕಾಮಗಾರಿಯನ್ನು ತುರ್ತುಗಿ ಕೈಗೊಳ್ಳಲು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ (ಕೆಆರ್‌ಐಡಿಎಲ್) ಅಂದಾಜು ಪಟ್ಟಿ ಪಡೆದು, ಇಲಾಖೆಯ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ’ ಎಂದು ಹೇಳಿದ್ದಾರೆ.
‘ಪುರುಷರ ಶೌಚಾಲಯಗಳ ನವೀಕರಣ ಮತ್ತು ಒಳಚರಂಡಿ ನಿರ್ಮಾಣ ಕಾಮಗಾರಿಗೆ ₹75.30 ಲಕ್ಷ ಅನುದಾನ ಅಗತ್ಯವಿದ್ದು, ಇದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಕಾಮಗಾರಿ ಪ್ರಗತಿಯಲ್ಲಿದೆ. ಚಾವಣಿ ಕಾಮಗಾರಿಗೆ ₹ 65.20 ಲಕ್ಷ ಅಗತ್ಯವಿದ್ದು, ಪ್ರಸ್ತಾವ ನಿರ್ದೇಶನಾಲಯದ ಪರಿಶೀಲನೆಯಲ್ಲಿದೆ. ಈ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿದಲ್ಲಿ ಆಸ್ಪತ್ರೆ ಚಾವಣಿಯ ಸೋರಿಕೆಯನ್ನು ತಡೆಗಟ್ಟಬಹುದಾಗಿದೆ’ ಎಂದು ತಿಳಿಸಿದ್ದಾರೆ.
‘ಈ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಕೊರತೆಯಿದ್ದರೂ, ಉತ್ತಮವಾದ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ. ಈಗಾಗಲೇ ಪರಿಶೀಲನೆ ಹಂತದಲ್ಲಿರುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿ, ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದ್ದಾರೆ.
‘ಆಸ್ಪತ್ರೆಯಲ್ಲಿನ ಬೆಂಚುಗಳು ಹಳೆಯದಾಗಿದ್ದು, ರೋಗಿಗಳಿಗೆ ಮಸಾಜ್ ಮಾಡಿದ ನಂತರ ಸೂರ್ಯನ ಕಿರಣಗಳ ಥೆರಪಿಗೆ ಅಳವಡಿಸಲಾಗಿದೆ. ತೈಲಗಳಿಂದ ಬೆಂಚು ಹಾಳಾಗಿದ್ದು, ದುರಸ್ತಿ ಮಾಡಲಾಗುತ್ತಿದೆ. ಮುರಿದ ಬೆಂಚುಗಳನ್ನು ತೆರವುಗೊಳಿಸಿ, ಹೊಸ ಬೆಂಚುಗಳ ಅಳವಡಿಕೆಗೆ ಕ್ರಮವಹಿಸಲಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.