ADVERTISEMENT

ಬೆಂಗಳೂರು: ಸಾಮೂಹಿಕ ಅತ್ಯಾಚಾರ ಪ್ರಕರಣ- ಸಂತ್ರಸ್ತೆ ಸಮ್ಮುಖದಲ್ಲಿ ಸ್ಥಳ ಮಹಜರು

ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಮೇ 2021, 17:19 IST
Last Updated 29 ಮೇ 2021, 17:19 IST
ಆರೋಪಿಗಳು
ಆರೋಪಿಗಳು   

ಬೆಂಗಳೂರು: ಬಾಂಗ್ಲಾದೇಶದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೂರ್ವ ವಿಭಾಗದ ಪೊಲೀಸರು, ಕೃತ್ಯದ ಬಳಿಕ ನಾಪತ್ತೆಯಾಗಿದ್ದ ಸಂತ್ರಸ್ತೆಯನ್ನು ಕೇರಳದಲ್ಲಿ ಪತ್ತೆ ಮಾಡಿ ನಗರಕ್ಕೆ ಕರೆತಂದಿದ್ದಾರೆ.

ಕೃತ್ಯದ ವಿಡಿಯೊ ಆಧರಿಸಿ ಇಬ್ಬರು ಮಹಿಳೆಯರು ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಸಂತ್ರಸ್ತೆ ಪತ್ತೆಗಾಗಿ ಮಹಿಳಾ ಇನ್‌ಸ್ಪೆಕ್ಟರ್‌ ನೇತೃತ್ವದ ತಂಡ ಕೇರಳಕ್ಕೆ ತೆರಳಿತ್ತು.

‘ಸಂತ್ರಸ್ತೆಯನ್ನು ಬಿಗಿ ಭದ್ರತೆಯಲ್ಲಿ ನಗರಕ್ಕೆ ಶನಿವಾರ ಬೆಳಿಗ್ಗೆ ಕರೆತರಲಾಗಿದೆ. ಘಟನೆ ಬಗ್ಗೆ ಸಂತ್ರಸ್ತೆ ಹೇಳಿಕೆ ಪಡೆದು ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ರಾಮಮೂರ್ತಿನಗರ ಠಾಣೆ ವ್ಯಾಪ್ತಿಯ ಕೆ. ಚನ್ನಸಂದ್ರ ಬಳಿಯ ಮನೆಯೊಂದರಲ್ಲಿ ಕೃತ್ಯ ನಡೆದಿತ್ತು. ಮನೆಯನ್ನು ಸಂತ್ರಸ್ತೆ ಗುರುತಿಸಿದ್ದು, ಆರೋಪಿಗಳ ವರ್ತನೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ.’

‘ಸಂತ್ರಸ್ತೆ ಬಂಧಿತ ಆರೋಪಿಗಳ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ. ಆ ಬಳಿಕ, ಆಕೆಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ ಹೇಳಿಕೆ ದಾಖಲಿಸಿಕೊಳ್ಳಲಾಗುವುದು’ ಎಂದೂ ಮೂಲಗಳು ಹೇಳಿವೆ.

ಸಂತ್ರಸ್ತೆ, ಬಂಧಿತರು ಅಕ್ರಮ ವಾಸಿಗಳು: ಸುದ್ದಿಗಾರರ ಜೊತೆ ಮಾತನಾಡಿದ ಎಸ್‌.ಡಿ. ಶರಣಪ್ಪ, ‘ವಿಡಿಯೊ ಮೂಲಕ ಕೃತ್ಯ ಬಯಲಿಗೆ ಬಂದಿದೆ. ಸಂತ್ರಸ್ತೆ ಹಾಗೂ ಆರೋಪಿಗಳು, ಬಾಂಗ್ಲಾದೇಶದಿಂದ ಬಂದು ಇಲ್ಲಿ ಅಕ್ರಮವಾಗಿ ವಾಸವಿದ್ದರು ಎಂಬುದು ಗೊತ್ತಾಗಿದೆ’ ಎಂದರು.

‘ಆರೋಪಿಗಳ ಹಿನ್ನೆಲೆ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಅವರೆಲ್ಲರೂ ಸೇರಿ ಒಂದೇ ವೃತ್ತಿ ಮಾಡುತ್ತಿದ್ದ ಸಂಗತಿ ಗೊತ್ತಾಗಿದೆ. ವೃತ್ತಿ ಬಗ್ಗೆ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.