ADVERTISEMENT

ಪೊಲೀಸರ ವರ್ಗಾವಣೆ | ನಿಯಮ ಬದಲಾವಣೆಗೆ ಪರಿಶೀಲನೆ: ಆರಗ ಜ್ಞಾನೇಂದ್ರ

ವಿಧಾನ ಪರಿಷತ್‌ನಲ್ಲಿ ಮಾಹಿತಿ ನೀಡಿದ ಗೃಹ ಸಚಿವ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 20:16 IST
Last Updated 22 ಮಾರ್ಚ್ 2022, 20:16 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಬೆಂಗಳೂರು: ‘ಪೊಲೀಸ್‌ ಇಲಾಖೆಯಲ್ಲಿ ಮರು ನೇಮಕಾತಿ ಆಗಿರುವ ಮಾಜಿ ಸೈನಿಕ ಪೊಲೀಸ್‌ ಸಿಬ್ಬಂದಿ, ನೇಮಕಗೊಂಡ ಸ್ಥಳದಲ್ಲಿ ಏಳು ವರ್ಷ ಕರ್ತವ್ಯ ನಿರ್ವಹಿಸಿದ ಬಳಿಕ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ನಿಯಮ ಬದಲಿಸುವ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, ‘ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವವರಿಗೆ ಏಳು ವರ್ಷದವರೆಗೆ ನಿಯೋಜಿತ ಸ್ಥಳದಿಂದ ವರ್ಗಾವಣೆ ಸಿಗುತ್ತಿಲ್ಲ. ಅದನ್ನು ಎರಡು ವರ್ಷಕ್ಕೆ ಇಳಿಸಿ, ಕುಟುಂಬದ ಜತೆ ಕಾಲ ಕಳೆಯಲು ಅವಕಾಶ ನೀಡಬೇಕು. ಪೊಲೀಸರ ಕಷ್ಟ ಪರಿಹಾರ ಭತ್ಯೆ ಮತ್ತು ರಜಾ ಸೌಲಭ್ಯದಲ್ಲಿ ತಾರತಮ್ಯ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ಚರ್ಚೆಯ ಬಳಿಕ ಉತ್ತರಿಸಿದ ಸಚಿವರು, ‘ಕೆಲವು ನಿರ್ಬಂಧಗಳ ಕಾರಣಕ್ಕೆ ಪೊಲೀಸ್ ಕೆಲಸದಲ್ಲಿ ನಿರತರಾಗಿರುವ ನಿವೃತ್ತ ಸೈನಿಕರಿಗೆ ಏಳು ವರ್ಷಕ್ಕೆ ಮೊದಲೇ ವರ್ಗಾವಣೆ ನೀಡುವುದು ಕಷ್ಟವಾಗಲಿದೆ’ ಎಂದರು.

ADVERTISEMENT

‘ಪೊಲೀಸ್ ಕೆಲಸಕ್ಕೆ ನೇಮಿಸುವಾಗ ವಲಯ, ಪ್ರದೇಶವಾರು ಅಧಿಸೂಚನೆ ಹೊರಡಿಸಲಾಗುತ್ತದೆ. ಮಾಜಿ ಸೈನಿಕರಿಗೆ ಶೇ 10 ಮೀಸಲಾತಿ, ‌40 ವರ್ಷ ವಯೋಮಿತಿ ನೀಡಲಾಗಿದೆ. ಪತಿ- ಪತ್ನಿ ಮತ್ತು ಗಂಭೀರ ಪ್ರಕರಣಗಳಲ್ಲಿ ವರ್ಗಾವಣೆಗೆ ಎರಡು ವರ್ಷದ ಮಿತಿ ಇದೆ. ಮಾಜಿ ಸೈನಿಕರಿಗೂ ಈ ಸವಲತ್ತು ನೀಡಿದರೆ ಇತರರೂ ಕೇಳುವ ಸಾಧ್ಯತೆ ಇದೆ. ಮಾಜಿ ಸೈನಿಕರ ಬೇಡಿಕೆಯಂತೆ ಅವರ ತವರಿಗೆ ವರ್ಗಾವಣೆ ತಕ್ಷಣ ನೀಡಿದರೆ ಕೆಲವು ಭಾಗದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಎದುರಾಗಲಿದೆ’ ಎಂದು ಸಚಿವರು ಹೇಳಿದರು.

‘ಎಲ್ಲ ಶಾಸಕರಿಗೆ ಅಂಗರಕ್ಷಕರು ಯಾಕೆ ಬೇಕು? ಅಂಗರಕ್ಷಕರ ಅಗತ್ಯವಿದೆ ಎಂದು ಬರೆದು ಕೊಡುವವರಿಗೆ ಮಾತ್ರ ಕೊಡಿ’ ಎಂದು ಬಿಜೆಪಿಯ ಆಯನೂರು ಮಂಜುನಾಥ ನೀಡಿದ ಸಲಹೆಯನ್ನು ಪರಿಶೀಲಿಸುವುದಾಗಿ ಸಚಿವರು ತಿಳಿಸಿದರು.

ಪೊಲೀಸರಿಗೆ ಹೆಚ್ಚಿನ ಸೌಲಭ್ಯ ಒದಗಿಸುವಂತೆ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ಸಿನ ಕೆ. ಗೋವಿಂದರಾಜ್, ಮಂಜುನಾಥ ಭಂಡಾರಿ, ಬಿಜೆಪಿಯ ಎನ್‌. ರವಿಕುಮಾರ್, ತೇಜಸ್ವಿನಿ ಗೌಡ ಕೂಡಾ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.