ADVERTISEMENT

₹ 5 ಲಕ್ಷ ಸುಲಿಗೆ: ಇನ್‌ಸ್ಪೆಕ್ಟರ್, ಪಿಎಸ್‌ಐಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 19:30 IST
Last Updated 29 ಜುಲೈ 2021, 19:30 IST
ಇನ್‌ಸ್ಪೆಕ್ಟರ್ ರೇಣುಕಾ
ಇನ್‌ಸ್ಪೆಕ್ಟರ್ ರೇಣುಕಾ   

ಬೆಂಗಳೂರು: ಪ್ರಕರಣವೊಂದರಲ್ಲಿ ಆರೋಪಿಯಿಂದ ₹ 5 ಲಕ್ಷ ಸುಲಿಗೆ ಮಾಡಿ, ₹ 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ವೈಟ್‌ಫೀಲ್ಡ್‌ ವಿಭಾಗದ ಸೈಬರ್‌ ಕ್ರೈಂ ಠಾಣೆಯ ಇನ್‌ಸ್ಪೆಕ್ಟರ್ ಸೇರಿ ನಾಲ್ವರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನೆಪದಲ್ಲಿ ಆರೋಪಿಗೆ ಕಿರುಕುಳ ನೀಡಿದ್ದ ಪೊಲೀಸರು, ಅವರಿಂದ ಹಣ ಸುಲಿಗೆ ಮಾಡಿದ್ದರು. ಬೇಸತ್ತ ಆರೋಪಿ, ಆಡಿಯೊ ರೆಕಾರ್ಡಿಂಗ್ ಸಮೇತ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದರು.

ಇನ್‌ಸ್ಪೆಕ್ಟರ್‌ ರೇಣುಕಾ, ಸಬ್‌ ಇನ್‌ಸ್ಪೆಕ್ಟರ್‌ಗಳಾದ (ಪಿಎಸ್‌ಐ) ನವೀನ್‌, ಗಣೇಶ್‌ ಹಾಗೂ ಕಾನ್‌ಸ್ಟೆಬಲ್‌ ಹೇಮಂತ್‌ ವಿರುದ್ಧ ಜುಲೈ 20ರಂದು ಎಫ್‌ಐಆರ್‌ ದಾಖಲಾಗಿತ್ತು. ಪ್ರಾಥಮಿಕ ತನಿಖೆ ನಡೆಸಿದ್ದ ಎಸಿಬಿ ಪೊಲೀಸರು, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಾಗೂ ನಗರ ಪೊಲೀಸ್ ಕಮಿಷನರ್ ಕಮಲ್‌ ಪಂತ್‌ ಅವರಿಗೆ ವರದಿ ನೀಡಿದ್ದರು.

ADVERTISEMENT

ಎಸಿಬಿ ವರದಿ ಪರಿಶೀಲಿಸಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಇನ್‌ಸ್ಪೆಕ್ಟರ್‌ ರೇಣುಕಾ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪಿಎಸ್‌ಐಗಳಾದ ನವೀನ್, ಗಣೇಶ್ ಹಾಗೂ ಕಾನ್‌ಸ್ಟೆಬಲ್ ಹೇಮಂತ್ ಅವರನ್ನು ಕಮಿಷನರ್ ಅಮಾನತು ಮಾಡಿದ್ದಾರೆ.

ಪ್ರಕರಣ ವಿವರ: ‘ಒಳಾಂಗಣ ವಿನ್ಯಾಸ ಕೆಲಸ ಮಾಡುವುದಾಗಿ ಹೇಳಿ ಹಣ ಪಡೆದಿದ್ದ ಸುದೀಪ್‌ ಎಂಬುವರು, ಯಾವುದೇ ಕೆಲಸ ಮಾಡಿಲ್ಲ. ಹಣವನ್ನೂ ವಾಪಸು ಕೊಟ್ಟಿಲ್ಲ’ ಎಂದು ಶ್ವೇತಾಸಿಂಗ್ ಎಂಬುವರು ವೈಟ್‌ಫೀಲ್ಡ್‌ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಇದೇ ಪ್ರಕರಣದಲ್ಲೇ ಪೊಲೀಸರು ತಮ್ಮಿಂದ ಹಣ ಸುಲಿಗೆ ಮಾಡಿರುವುದಾಗಿ ಸುದೀಪ್, ಎಸಿಬಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.

‘ಜುಲೈ 16ರಂದು ಮನೆಗೆ ಬಂದಿದ್ದ ಪೊಲೀಸರು, ವಿಚಾರಣೆ ಮಾಡಬೇಕೆಂದು ಹೇಳಿ ಪತ್ನಿಯೊಂದಿಗೆ ಬಲವಂತವಾಗಿ ಠಾಣೆಗೆ ಕರೆದೊಯ್ದಿದ್ದರು. ಬಾಕಿ ಇರುವ ಕೆಲಸ ಪೂರ್ಣಗೊಳಿಸಲು ಕಾಲಾವಕಾಶ ನೀಡುವಂತೆ ಕೋರಿದ್ದೆ. ಆಗ ಪಿಎಸ್‌ಐ ನವೀನ್, ‘ಶ್ವೇತಾ ಸಿಂಗ್‌ ಅವರಿಗೆ ಕೂಡಲೇ ₹ 5 ಲಕ್ಷ ನೀಡಬೇಕು ಹಾಗೂ ₹ 10 ಲಕ್ಷ ಲಂಚವನ್ನು ನಮಗೆ ನೀಡಿದರೆ ಬಂಧಿಸುವುದಿಲ್ಲ’ ಎಂದಿದ್ದರು. ಸಂಬಂಧಿ ಚಂದ್ರನ್‌ ಬಳಿ ₹ 10 ಲಕ್ಷ ಪಡೆದು, ₹ 5 ಲಕ್ಷವನ್ನು ಶ್ವೇತಾ ಸಿಂಗ್‌ ಖಾತೆಗೆ ವರ್ಗಾವಣೆ ಮಾಡಿದ್ದೆ. ಉಳಿದ ₹ 5 ಲಕ್ಷವನ್ನು ಪಿಎಸ್‌ಐ ನವೀನ್‌ ಅವರಿಗೆ ಕೊಟ್ಟಿದೆ’ ಎಂದು ಸುದೀಪ್ ದೂರಿನಲ್ಲಿ ಉಲ್ಲೇಖಿಸಿದ್ದರು.

‘ಬಾಕಿ ₹ 5 ಲಕ್ಷ ತಂದುಕೊಡುವಂತೆ ಪೊಲೀಸರು ಹೇಳಿದ್ದರು. ಜುಲೈ 17ರಂದು ಠಾಣೆಗೆ ಹೋಗಿ ಹಣ ಹೊಂದಿಸಲು ಆಗಿಲ್ಲವೆಂದು ಹೇಳಿದ್ದೆ. ಜುಲೈ 19ರಂದು ಮೊಬೈಲ್‌ಗೆ ಕರೆಮಾಡಿ ಹಣ ತರುವಂತೆ ಪೊಲೀಸರು ಪುನಃ ಹೇಳಿದ್ದರು. ಠಾಣೆಗೆ ಹೋಗಿ ಪಿಎಸ್‌ಐ ನವೀನ್‌ ಅವರನ್ನು ಭೇಟಿಯಾದೆ. ‘ಆರಂಭದಲ್ಲಿ ಕೊಟ್ಟ ₹ 5 ಲಕ್ಷವನ್ನು ಮೇಡಂ (ಇನ್‌ಸ್ಪೆಕ್ಟರ್‌) ಮನೆಗೆ ಕೊಂಡೊಯ್ದರು. ನಮಗೆ ಒಂದು ರೂಪಾಯಿಯನ್ನೂ ಕೊಡಲಿಲ್ಲ. ಇವತ್ತು ₹ 2 ಲಕ್ಷ ಕೊಡು. ನಾಳೆ ₹ 2 ಲಕ್ಷ ತಂದು ಕೊಡು’ ಎಂದು ಪಿಎಸ್‌ಐ ಹೇಳಿದ್ದರು’ ಎಂದೂ ಸುದೀಪ್ ದೂರಿನಲ್ಲಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.