ADVERTISEMENT

ಪೊಲೀಸರ ಅಂತರ್ ಜಿಲ್ಲಾ ವರ್ಗಾವಣೆ: 7 ವರ್ಷ ಸೇವೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 3:17 IST
Last Updated 3 ಮಾರ್ಚ್ 2023, 3:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪೊಲೀಸರ ಅಂತರ್ ಜಿಲ್ಲಾ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಹೊಸ ನಿಯಮಾವಳಿಗಳಿಗೆ ಸಂಬಂಧಪಟ್ಟಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.

ಕಾನ್‌ಸ್ಟೆಬಲ್‌ನಿಂದ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ವರೆಗಿನ (ಪಿಎಸ್‌ಐ) ಹುದ್ದೆಗಳಲ್ಲಿರುವವರ ವರ್ಗಾವಣೆಗೆ ಆಯಾ ಘಟಕಗಳಲ್ಲಿ ಪ್ರಕ್ರಿಯೆ ಶುರುವಾಗಿದೆ. ವರ್ಗಾವಣೆ ಬಯಸುವ ಸಿಬ್ಬಂದಿ, ಒಂದೇ ಹುದ್ದೆಯಲ್ಲಿ 7 ವರ್ಷ ಸೇವೆ ಸಲ್ಲಿಸಿರಬೇಕೆಂಬ ನಿಯಮ ರೂಪಿಸಲಾಗಿದೆ.

ಇದು, ಪತಿ– ಪತ್ನಿ ವರ್ಗಾವಣೆ ಬಯಸಿರುವ ಸಿಬ್ಬಂದಿಗೆ ಫಜೀತಿ ಉಂಟು ಮಾಡಿದೆ. ಮಾಜಿ ಸೈನಿಕ ಕೋಟಾದಲ್ಲಿ ಪೊಲೀಸರಾದವರಿಗೆ 3 ವರ್ಷಗಳ ಸೇವೆ ಕಡ್ಡಾಯಗೊಳಿಸಲಾಗಿದೆ.

ADVERTISEMENT

‘ಸರ್ಕಾರದ ಆದೇಶದಂತೆ ಪೊಲೀಸರ ಅಂತರ್‌ ಜಿಲ್ಲಾ ವರ್ಗಾವಣೆಗೆ ನಿಯಮ ರೂಪಿಸಲಾಗಿದೆ. ಅರ್ಹರಿಂದ ಅರ್ಜಿಗಳನ್ನು ಪಡೆದು ಆನ್‌ಲೈನ್ ವ್ಯವಸ್ಥೆ ಮೂಲಕ ವರ್ಗಾವಣೆ ಪ್ರಕ್ರಿಯೆ ಆರಂಭಿಸಿ. ಮೊದಲು ಬಂದವರಿಗೆ ಆದ್ಯತೆ ನೀಡಿ’ ಎಂದು ಪ್ರವೀಣ್ ಸೂದ್ ಆದೇಶದಲ್ಲಿ ತಿಳಿಸಿದ್ದಾರೆ.

‘ಬೆಂಗಳೂರು, ಮಂಗಳೂರು ಕಮಿಷನರೇಟ್ ಹಾಗೂ ಪಶ್ಚಿಮ ವಲಯ ಜಿಲ್ಲೆಗಳಲ್ಲಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಈ ಆದೇಶ ಅನ್ವಯವಾಗಲಿದೆ. ಮೂರು ತಿಂಗಳಿನಲ್ಲಿ ಎಲ್ಲ ವರ್ಗಾವಣೆ ಅರ್ಜಿಗಳು ವಿಲೇವಾರಿಯಾಗಬೇಕು.’

‘ಪಿಎಸ್‌ಐಗಳು–ಕಾನ್‌ಸ್ಟೆಬಲ್‌ಗಳು, ಮದುವೆ ಕಾರಣಕ್ಕೆ ವರ್ಗಾವಣೆ ಪಡೆಯಬಹುದು. ಆದರೆ, ಅವರು 7 ವರ್ಷ ಒಂದೇ ಸ್ಥಳದಲ್ಲಿ ಕೆಲಸ ಮಾಡಿರಬೇಕು. ಮಾಜಿ ಸೈನಿಕರಿಗೆ 3 ವರ್ಷ ಸೇವೆ ಕಡ್ಡಾಯ. ಎಎಸ್‌ಐ–ಹೆಡ್‌ಕಾನ್‌ಸ್ಟೆಬಲ್‌ಗಳು, ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಬಹುದು. ಅವರಿಗೂ ಹೊಸ ನಿಯಮ ಅನ್ವಯವಾಗಲಿದೆ’ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಪತಿ– ಪತ್ನಿಗೆ ಅಡ್ಡಿ: ‘ಹೊಸ ನಿಯಮದಿಂದ ಪತಿ– ಪತ್ನಿ ಒಂದೇ ಘಟಕದಲ್ಲಿ ಕೆಲಸ ಮಾಡಲು
ಸಾಧ್ಯವಾಗುವುದಿಲ್ಲ. 7 ವರ್ಷ ಸೇವೆ ಕಡ್ಡಾಯವನ್ನು, ಮೂರು ವರ್ಷಕ್ಕೆ ಇಳಿಸಬೇಕು’ ಎಂದು ಕೆಲ ಸಿಬ್ಬಂದಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.