ಬೆಂಗಳೂರು: ಹಣ ಹೂಡಿಕೆ ಮೇಲೆ ಶೇ 12ರಿಂದ ಶೇ 24ರಷ್ಟು ಬಡ್ಡಿ ನೀಡುವುದಾಗಿ ಆಮಿಷವೊಡ್ಡಿದ್ದ ‘ಮೇಜರ್ಸ್ ಬರ್ಕಾ ಇನ್‌ವೆಸ್ಟ್‌ಮೆಂಟ್ ಕನ್ಸಲ್ಟೆಂಟ್’ ಕಂಪನಿ ಏಜೆಂಟರು, ಸಾವಿರಾರು ಮಂದಿಯಿಂದ ಹಣ ಕಟ್ಟಿಸಿಕೊಂಡು ವಂಚಿಸಿರುವ ಸಂಬಂಧ ಆರ್.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕಂಪನಿಯ ಗ್ರಾಹಕ ಸಯ್ಯದ್ ನಿಜಾಮುದ್ದೀನ್ ಎಂಬುವರು ದೂರು ನೀಡಿದ್ದಾರೆ. ಏಜೆಂಟರಾದ ಶಫೀವುಲ್ಲಾ, ರಫೀವುಲ್ಲಾ, ಜಫೀವುಲ್ಲಾ, ಅಬ್ದುಲ್ ರಹಮಾನ್, ಸಲ್ಮಾ, ತಾಜ್‌ಉನ್ನೀಸಾ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಕಂಪನಿ ಪರ ಕೆಲಸ ಮಾಡುತ್ತಿದ್ದ ಏಜೆಂಟರು, ನಿಜಾಮುದ್ದಿನ್ ಅವರಿಂದ ₹ 25 ಲಕ್ಷ ಹೂಡಿಕೆ ಮಾಡಿಸಿದ್ದರು. ಕೆಲ ತಿಂಗಳು ಬಡ್ಡಿ ನೀಡಿ, ನಂತರ ಸ್ಥಗಿತಗೊಳಿಸಿದ್ದರು. ಸಿಬಿಐ ರಸ್ತೆಯಲ್ಲಿರುವ ಕಚೇರಿಗೆ ಹೋಗಿದ್ದ ಗ್ರಾಹಕ, ಹಣ ವಾಪಸು ನೀಡುವಂತೆ ಒತ್ತಾಯಿಸಿದ್ದರು. ಏಜೆಂಟರು ಹಣ ಮರಳಿಸಲು ಕೆಲ ದಿನ ಕಾಲಾವಕಾಶ ಪಡೆದಿದ್ದರು’ ಎಂದರು.
’ಇತ್ತೀಚೆಗೆ ಆರೋಪಿಗಳು ಕಂಪನಿಯ ಕಚೇರಿ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾರೆ. ನಿಜಾಮುದ್ದೀನ್ ರೀತಿಯಲ್ಲೇ ಸಾವಿರಾರು ಮಂದಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿರುವ ಮಾಹಿತಿ ಇದೆ. ಆ್ಯಂಬಿಡೆಂಟ್ ವಂಚನೆ ರೀತಿಯಲ್ಲೇ ಈ ಕಂಪನಿಯ ಗ್ರಾಹಕರಿಗೂ ವಂಚನೆಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.