ADVERTISEMENT

ಬಡ್ಡಿ ವ್ಯವಹಾರ; ಫೈನಾನ್ಶಿಯರ್ ಮನೆ ಮೇಲೆ ದಾಳಿ, ಬಂಧನ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 5:21 IST
Last Updated 6 ಡಿಸೆಂಬರ್ 2020, 5:21 IST
ನಾಗರಾಜ್ ಶೆಟ್ಟಿ
ನಾಗರಾಜ್ ಶೆಟ್ಟಿ   

ಬೆಂಗಳೂರು: ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಹಾಗೂ ಹೆಚ್ಚಿನ ಬಡ್ಡಿ ಪಾವತಿಸದ ಸಾರ್ವಜನಿಕರಿಗೆ ಜೀವ ಬೆದರಿಕೆ ಹಾಕುತ್ತಿದ್ದ ಆರೋಪದಡಿ ನಾಗರಾಜ್ ಶೆಟ್ಟಿ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ವೈಯಾಲಿಕಾವಲ್ ನಿವಾಸಿಯಾದ ನಾಗರಾಜ್, ಫೈನಾನ್ಶಿಯರ್ ಆಗಿದ್ದಾರೆ. ಅವರ ವಿರುದ್ಧ ಇತ್ತೀಚೆಗೆ ದೂರು ಬಂದಿತ್ತು. ಅದರ ತನಿಖೆ ಕೈಗೊಂಡಿದ್ದ ವಿಶೇಷ ತಂಡ, ಆರೋಪಿಯನ್ನು ಬಂಧಿಸಿದೆ’ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ನಾಗರಾಜ್ ಅವರ ಮನೆ ಮೇಲೂ ದಾಳಿ ನಡೆಸಲಾಯಿತು. ₹22 ಲಕ್ಷ ನಗದು, 164 ಚೆಕ್‌ಗಳು, 84 ಡಿ.ಡಿ.ಗಳು ಹಾಗೂ ಲಕ್ಷಾಂತರ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಅವುಗಳನ್ನೂ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ಅಕ್ರಮ ಬಡ್ಡಿ ವ್ಯವಹಾರ ಸಂಬಂಧ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹಲವು ವರ್ಷಗಳಿಂದ ಬಡ್ಡಿ ವ್ಯವಹಾರ ನಡೆಸುತ್ತಿದ್ದ ನಾಗರಾಜ್, ಶ್ಯೂರಿಟಿ ಇಟ್ಟುಕೊಂಡು ಸಾಲ ಕೊಡುತ್ತಿದ್ದರು. ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದರು. ಚಕ್ರ ಬಡ್ಡಿ ಸೇರಿಸಿ ಕಿರುಕುಳ ನೀಡುತ್ತಿದ್ದರು. ಅಸಲು ಹಾಗೂ ನಿಗದಿತ ಬಡ್ಡಿ ಪಾವತಿ ಮಾಡಿದರೂ ಮತ್ತಷ್ಟು ಬಡ್ಡಿ ಪಾವತಿಸುವಂತೆ ಹೇಳುತ್ತಿದ್ದರು’ ಎಂದೂ ವಿವರಿಸಿದರು.

‘ನಾಗರಾಜ್ ಶೆಟ್ಟಿ ಹಲವರಿಗೆ ಸಾಲ ಕೊಟ್ಟು ಹೆಚ್ಚಿನ ಬಡ್ಡಿ ಪಡೆದಿದ್ದಾರೆ. ಅವರ ವಿರುದ್ಧ ದೂರು ನೀಡುವವರು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿ ಸಂಪರ್ಕಿಸಬಹುದು’ ಎಂದೂ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.