ADVERTISEMENT

ಒಳ ಮೀಸಲಾತಿ | ಛಲವಾದಿ, ಹೊಲಯ ಎಂದೇ ಬರೆಯಿರಿ: ಛಲವಾದಿ ಮಹಾಸಭಾ ಮನವಿ

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:21 IST
Last Updated 8 ಮೇ 2025, 15:21 IST
<div class="paragraphs"><p>ಒಳ ಮೀಸಲಾತಿ (ಪ್ರಾತಿನಿಧಿಕ ಚಿತ್ರ)</p></div>

ಒಳ ಮೀಸಲಾತಿ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವುದಕ್ಕಾಗಿ ನಡೆಯುತ್ತಿರುವ ಸಮೀಕ್ಷೆಯಲ್ಲಿ ಬಲಗೈ, ಛಲವಾದಿ, ಹೊಲಯ, ಮಹರ್, ಪರಯ್ಯ, ಮಾಲಾ, ಚನ್ನದಾಸರ ಎಂಬ ಮೂಲ ಜಾತಿಯನ್ನು ಬರೆಯಬೇಕು ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಹೇಳಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಸಿದ್ದಯ್ಯ, ‘ಒಳ ಮೀಸಲಾತಿಗೆ ಸಂಬಂಧಿಸಿದ ಜಾತಿ ಸಮೀಕ್ಷೆ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲನೇ ಹಂತದಲ್ಲಿ ಮೇ 5ರಿಂದ 17ರವರೆಗೆ ಮನೆ ಮನೆ ಸಮೀಕ್ಷೆ ಜರುಗಲಿದೆ. ಮೊದಲನೇ ಹಂತದ ಸಮೀಕ್ಷಾ ಪ್ರಕ್ರಿಯೆಯಲ್ಲಿ ಭಾಗವಹಿಸದವರು ಮೇ 19ರಿಂದ 21ರವರೆಗೆ ನಡೆಯುವ ಮತಗಟ್ಟೆ ಪ್ರದೇಶಗಳಲ್ಲಿ ಗುರುತಿಸಿರುವ ವಿಶೇಷ ಶಿಬಿರಗಳಲ್ಲಿ ನಡೆಯುವ ಎರಡನೇ ಹಂತದ ಸಮೀಕ್ಷೆಯಲ್ಲಿ ಭಾಗವಹಿಸಬಹುದು. ಮೇ 19ರಿಂದ 23ರವರೆಗೆ ನಡೆಯುವ ಆನ್‌ಲೈನ್‌ ಸಮೀಕ್ಷೆಯಲ್ಲಿ ಜಾತಿ ಪ್ರಮಾಣ ಪತ್ರದ ಆರ್‌.ಡಿ ಸಂಖ್ಯೆಯ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಬಹುದು’ ಎಂದು ತಿಳಿಸಿದರು.

ADVERTISEMENT

‘ಕೆಲವು ಜಿಲ್ಲೆಗಳಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಎಂದು ಬಲಗೈ ಮತ್ತು ಎಡಗೈ ಎರಡೂ ಗುಂಪಿನ ಜಾತಿಗಳು ಗುರುಸಿಕೊಂಡಿವೆ. ಆದ್ದರಿಂದ ಜಾತಿ ಸಮೀಕ್ಷೆಯ ಸಂದರ್ಭದಲ್ಲಿ ಮೂಲ ಜಾತಿ, ಉಪ ಜಾತಿಯ ಕಾಲಂನಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಎಂದು ನಮೂದಿಸಬಾರದು. ಬಲಗೈ ಗುಂಪಿಗೆ ಸೇರಿದ ಸ್ಥಳೀಯವಾಗಿ ಗುರುತಿಸುವ ಮೂಲ ಜಾತಿಯ ಹೆಸರುಗಳಾದ ಬಲಗೈ, ಛಲವಾದಿ, ಹೊಲಯ, ಮಹರ್, ಪರಯ್ಯ, ಮಾಲಾ, ಚನ್ನದಾಸರ ಎಂದೇ ನಮೂದಿಸಬೇಕು’ ಎಂದು ಮನವಿ ಮಾಡಿದರು.

‘ಸರ್ಕಾರ ಸಮೀಕ್ಷೆಯ ಆಧಾರದ ಮೇಲೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಸೌಲಭ್ಯವನ್ನು ನೀಡುತ್ತದೆ. ಆದ್ದರಿಂದ ನಮ್ಮ ಮೂಲ ಜಾತಿ ಹಾಗೂ ಉಪ ಜಾತಿಯನ್ನು ನಮೂದಿಸಿದರೆ, ನಮ್ಮ ನಿಜವಾದ ಜನಸಂಖ್ಯೆಯ ಅನುಗುಣವಾಗಿ ಒಳ ಮೀಸಲಾತಿ ಸೌಲಭ್ಯ ದೊರೆಯಲಿದೆ. ಇಲ್ಲದಿದ್ದರೆ ನಮ್ಮ ಸಮುದಾಯಕ್ಕೆ ನಷ್ಟವಾಗಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.