ADVERTISEMENT

ಒಳಮೀಸಲಾತಿ: ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧಾರ

ಭೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 21:11 IST
Last Updated 27 ಮಾರ್ಚ್ 2023, 21:11 IST
   

ಬೆಂಗಳೂರು: ಪರಿಶಿಷ್ಟ ಜಾತಿಗಳ ವರ್ಗೀಕರಣ(ಒಳಮೀಸಲಾತಿ) ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಿರುವ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ನಿರ್ಧರಿಸಿದೆ.

ಭೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಂದಿನ ನಡೆಗಳ ಬಗ್ಗೆ ಒಕ್ಕೂಟ ನಿರ್ಣಯ ಕೈಗೊಂಡಿತು.

ಒಳ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ಇದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಈ ವಿಷಯವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಶಾಂತಿಯುತ ಹೋರಾಟ ನಡೆಸಲಾಗುವುದು ಎಂದು ಒಕ್ಕೂಟ ತಿಳಿಸಿದೆ.

ADVERTISEMENT

‘ವಸ್ತುನಿಷ್ಠ ಅಧ್ಯಯನ ಇಲ್ಲದೆ ಸ್ಪಶ್ಯರು, ಅಸ್ಪೃಶ್ಯರು, ಎಡಗೈ, ಬಲಗೈ, ಎಲ್ಲಾ ಸೌಲಭ್ಯ ಪಡೆದವರು, ಮುಂದುವರೆದವರು, ಅಭಿವೃದ್ಧಿ ಆಗಿರುವವರು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಉಪ ಸಮಿತಿಯ ವರದಿಯಲ್ಲಿ ಉಲ್ಲೇಖಿಸಿರುವುದು ಸರಿಯಲ್ಲ. ಇದನ್ನು ವಾಪಸ್ ಪಡೆಯಬೇಕು. ಅವಾಸ್ತವಿಕ ಅಂಶಗಳ ಮೂಲಕ ಪರಿಶಿಷ್ಟ ಸಹೋದರ ಸಮುದಾಯಗಳ ನಡುವಿನ ಐಕ್ಯತೆ ಒಡೆಯಲಾಗಿದೆ. ಈ ಉಪ ಸಮಿತಿಯ ವರದಿ ತಿರಸ್ಕರಿಸಬೇಕು’ ಎಂದು ಒತ್ತಾಯಿಸಿದೆ.

ಭೋವಿ, ಲಂಬಾಣಿ, ಕೊರಚ, ಕೊರಮ ಸಮುದಾಯಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈಬಿಡುವ ಪ್ರಸ್ತಾಪಗಳು ರಾಜ್ಯ ಸರ್ಕಾರದ ಮುಂದಿಲ್ಲ ಎಂಬ ಲಿಖಿತ ಉತ್ತರವನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಪತ್ರದ ಮೂಲಕ ರವಾನಿಸಿರುವುದು ಸ್ವಾಗತಾರ್ಹ. ಬೇರೆ ಬೇಡಿಕೆಗಳ ಬಗ್ಗೆ ರಾಜ್ಯವ್ಯಾಪಿ ಜನ ಜಾಗೃತಿ ಅಭಿಯಾನ, ಐಕ್ಯತೆ ಪ್ರದರ್ಶನ ಮತ್ತು ಅಹಿಂಸಾತ್ಮಕ ಪ್ರಜಾಸತ್ತಾತ್ಮಕ ಹೋರಾಟ ನಡೆಸಲಾಗುವುದು ಎಂದು ತಿಳಿಸಿದೆ.

ಸಾಹಿತಿ ಬಿ.ಟಿ.ಲಲಿತಾ ನಾಯಕ್, ಒಕ್ಕೂಟದ ಕಾರ್ಯಾಧ್ಯಕ್ಷ ರಾಘವೇಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ಅನಂತ ನಾಯ್ಕ್, ಮುಖಂಡರಾದ ಪ್ರಕಾಶ್ ರಾಥೋಡ್, ಸೀತಾರಾಂ, ಆದರ್ಶ ಯಲ್ಲಪ್ಪ, ಕಿರಣಕುಮಾರ್ ಕೊತ್ತಗೆರೆ, ರವಿ ಪೂಜಾರ್ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.