ದೇವನಹಳ್ಳಿ: ಎಲ್ಲ ಅಂತರರಾಷ್ಟ್ರೀಯ ವಿಮಾನಗಳು ಬುಧವಾರದಿಂದ (ಆಗಸ್ಟ್ 30ರಿಂದ) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–2ರಿಂದ ಹಾರಾಟ ನಡೆಸಲಿವೆ. ದೇಶಿ ವಿಮಾನಗಳು ಮಾತ್ರ ಟರ್ಮಿನಲ್–1ರಿಂದ ಸಂಚಾರ ನಡೆಸಲಿವೆ.
ಮೊದಲಿನ ವೇಳಾಪಟ್ಟಿಯಂತೆ ಸೆಪ್ಟೆಂಬರ್ 1ರಿಂದ ಟಿ-2ನಲ್ಲಿ ಪೂರ್ಣ ಪ್ರಮಾಣದಲ್ಲಿ ಅಂತರರಾಷ್ಟ್ರೀಯ ವಿಮಾನ ಸಂಚಾರ ಆರಂಭವಾಗಬೇಕಿತ್ತು. ಆದರೆ, ನಿಗದಿತ ದಿನಕ್ಕಿಂತ ಎರಡು ದಿನ ಮೊದಲೇ ಸಂಚಾರ ಆರಂಭವಾಗಲಿದೆ.
ಇನ್ನು ಮುಂದೆ ಟಿ–2 ಸಂಪೂರ್ಣವಾಗಿ ಅಂತರರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಮಾತ್ರ ಸಿಮೀತವಾಗಲಿದೆ. ಒಟ್ಟು 27 ವಿದೇಶಿ ಹಾಗೂ ಎರಡು ದೇಶಿ ವಿಮಾನಯಾನ ಸಂಸ್ಥೆಗಳು ಇಲ್ಲಿ ಕಾರ್ಯಾಚರಣೆ ನಡೆಸಲಿವೆ. ಟರ್ಮಿನಲ್-1 ದೇಶೀಯ ವಿಮಾನ ಹಾರಾಟಕ್ಕೆ ಮಾತ್ರ ಸೀಮತ ಮಾಡಲಾಗುತ್ತದೆ.
ಟರ್ಮಿನಲ್–1ರಲ್ಲಿರುವ ಎಲ್ಲ ಸೇವೆಗಳನ್ನು ಟರ್ಮಿನಲ್-2ಕ್ಕೆ ಸ್ಥಳಾಂತರ ಮಾಡಲಾಗಿದೆ. ಕಸ್ಟಮ್ಸ್ ಕಚೇರಿ, ಡ್ಯೂಟಿ ಫ್ರೀ ಅಂಗಡಿಗಳು, ಚಿಲ್ಲರೆ ಮಳಿಗೆ, ಆಹಾರ ಮಾರಾಟ ಕೇಂದ್ರಗಳನ್ನು ಇಲ್ಲಿ ತೆರೆಯಲಾಗಿದೆ.
ಈ ಟರ್ಮಿನಲ್‌ನಲ್ಲಿ ಒಟ್ಟು 30 ನಿರ್ಗಮನ ಗೇಟ್‌ಗಳಿವೆ. ಅದರಲ್ಲಿ 10 ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಕಾರ್ಯಾಚರಣೆ ಮಾಡಲಿವೆ. ಇದರೊಂದಿಗೆ 20 ಇ-ವಿಸಾ ಕೌಂಟರ್ ತೆರೆಯಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಕಟಣೆ ತಿಳಿಸಿದೆ.
ಹಸಿರು ಉದ್ಯಾನದ ಮಾದರಿಯ ಈ ಪರಿಸರಸ್ನೇಹಿ ಟರ್ಮಿನಲ್‌ನಲ್ಲಿ ಇದೇ ಜನವರಿ 15ರಿಂದ ದೇಶಿಯ ವಿಮಾನಯಾನ ಪ್ರಾರಂಭವಾಗಿತ್ತು. ಆರಂಭದಲ್ಲಿ ಆಕಾಸ್ ಏರ್‌ವೇಸ್, ಏರ್ ಏಷ್ಯಾ, ವಿಸ್ತಾರ ಸಂಸ್ಥೆಗಳ ವಿಮಾನಗಳು ಮಾತ್ರವೆ ಈ ಟರ್ಮಿನಲ್ ಬಳಕೆ ಮಾಡಿದ್ದವು. ಪ್ರಯಾಣಿಕರ ಅನುಕೂಲಕ್ಕಾಗಿ ಜುಲೈನಿಂದ ಟಿ-2ದಿಂದ ವೊಲ್ವೊ ವಾಯು ವಜ್ರ ಬಸ್ ಸಂಚಾರವನ್ನೂ ಆರಂಭಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.