ಬೆಂಗಳೂರು: ಸಾವಯವ, ಸಿರಿಧಾನ್ಯ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಆದ್ಯತೆ ನೀಡುತ್ತಿರುವ ಕೃಷಿ ಇಲಾಖೆ, ಈ ಬಾರಿಯ ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳದಲ್ಲಿ(ಇಂಟರ್‌ನ್ಯಾಷನಲ್ ಟ್ರೇಡ್ ಫೇರ್– ಐಟಿಎಫ್) ದೇಸಿ ತಳಿಯ ಬಿತ್ತನೆ ಬೀಜಗಳ ಪ್ರದರ್ಶನ ಆಯೋಜಿಸುತ್ತಿದೆ.
ಇದೇ 23ರಿಂದ 25ರವರೆಗೆ ನಗರದ ಅರಮನೆ ಮೈದಾನದಲ್ಲಿ ಜಿಐಝೆಡ್ ಮತ್ತು ಎಫ್‌ಐಬಿಎಲ್ ಸಹಯೋಗದೊಂದಿಗೆ ಆಯೋಜಿಸುತ್ತಿರುವ ಐಟಿಎಫ್ ಮೇಳದಲ್ಲಿ ದೇಸಿ ತಳಿಗಳ ಪ್ರದರ್ಶನಕ್ಕಾಗಿ ಪ್ರತ್ಯೇಕ ವಿಭಾಗವನ್ನು (ಪೆವಿಲಿಯನ್) ಮೀಸಲಿಟ್ಟಿದೆ.
ಈ ವಿಭಾಗದಲ್ಲಿ ರಾಗಿ, ಜೋಳ, ಭತ್ತ, ತೊಗರಿ, ಅವರೆ, ಸಿರಿಧಾನ್ಯಗಳು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳ ಸ್ಥಳೀಯ ಆಹಾರ ಧಾನ್ಯಗಳ ದೇಸಿ ತಳಿಯ ಬೀಜಗಳನ್ನು ಪ್ರದರ್ಶನಕ್ಕಿಡಲಾಗುತ್ತಿದೆ.
ಸರ್ಕಾರ ಈ ವರ್ಷದ ಬಜೆಟ್‌ನಲ್ಲಿ ಸ್ಥಳೀಯ ತಳಿಗಳ ಸಂರಕ್ಷಣೆಗಾಗಿ ಸಮುದಾಯ ಬೀಜ ಬ್ಯಾಂಕ್‌ಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಈ ಯೋಜನೆಯಡಿ ದೇಸಿ ತಳಿಗಳ ಬೀಜ ಪ್ರದರ್ಶನವನ್ನು ಏರ್ಪಡಿಸಿದೆ. ರಾಜ್ಯದಾದ್ಯಂತ ದೇಸಿ ತಳಿ ಸಂರಕ್ಷಣೆಯಲ್ಲಿ ತೊಡಗಿರುವ ಬೀಜ ಸಂರಕ್ಷಕರನ್ನು ಮೇಳಕ್ಕೆ ಆಹ್ವಾನಿಸಲಾಗುತ್ತಿದೆ. ಅವರಿಗೆ ಉಚಿತವಾಗಿ ಮಳಿಗೆಗಳನ್ನು ನೀಡಿ, ಅವರ ಸಂಗ್ರಹದಲ್ಲಿರುವ ತಳಿಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ನಿರ್ದೇಶಕ ಜಿ.ಟಿ.ಪುತ್ರ ‘ಪ್ರಜಾವಾಣಿ’ಗೆ ತಿಳಿಸಿದರು.
ಗೋಧಿಯಲ್ಲಿ, ಕುಂಚರ ಸಣ್ಣ, ಬಸ್ಸಿ,ಸದಕ ಸಣ್ಣ, ಸದಕ ದೊಡ್ಡ, ರಾಗಿಯಲ್ಲಿ, ಉದುರು ಮಲ್ಲಿಗೆ, ಕರಿರಾಗಿ, ಕುರುಬರಾಗಿ, ಕರಿಗಿಡ್ಡ, ಜಗಳೂರು ರಾಗಿ ತಳಿಗಳು, ಭತ್ತದಲ್ಲಿ, ಗಂಧಸಾಲೆ, ಹೊಳೆಸಾಲು, ರತ್ನಚೂಡಿ, ಕಗ್ಗ, ರಕ್ತಸಾಲಿ, ದೊಡ್ಡ ಬೈರನೆಲ್ಲು ತಳಿಗಳನ್ನು ಬೀಜ ಸಂರಕ್ಷಕರು ಪ್ರದರ್ಶನ ದಲ್ಲಿ ಇಡಲಿದ್ದಾರೆ. ಇದರ ಜೊತೆಗೆ, ಕೆಂಪು ನವಣೆ, ಬಿಳಿ ನವಣೆ, ಹುಲ್ಲು ನವಣೆ, ಕೃಷ್ಣದೇವರಾಯ ನವಣೆ, ಉರುವಲು ನವಣೆ, ಅಂಡಕೊರಲೆ ಯಂತಹ ಸಿರಿಧಾನ್ಯ ತಳಿಗಳು ಮತ್ತು ವೈವಿಧ್ಯಮಯ ಸೊಪ್ಪು ಮತ್ತು ತರಕಾರಿ ಬೀಜಗಳನ್ನು ಪ್ರದರ್ಶನದಲ್ಲಿ ಇಡಲಾಗುತ್ತಿದೆ. ‘ಇವೆಲ್ಲ ಉದಾಹರಣೆಗಳಷ್ಟೇ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ, ವೈವಿಧ್ಯಮಯ ತಳಿಗಳು ಪ್ರದರ್ಶನದಲ್ಲಿರಲಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೀಜ ಸಂರಕ್ಷರಿಂದ ಪ್ರದರ್ಶನ: ರಾಜ್ಯದಾದ್ಯಂತ ನೂರಾರು ದೇಸಿ ತಳಿಯ ಬೀಜ ಸಂರಕ್ಷಕರಿದ್ದಾರೆ. ಉತ್ತರ ಕನ್ನಡ, ಬೆಳಗಾವಿ, ದಾವಣಗೆರೆ, ಹಾವೇರಿ, ಕೋಲಾರ, ಮಂಡ್ಯ ಮತ್ತು ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಆಯ್ದ 15 ಜಿಲ್ಲೆಗಳಿಂದ 30 ಮಂದಿ ದೇಸಿ ತಳಿ ಬೀಜ ಸಂರಕ್ಷಕರನ್ನು ಮೇಳಕ್ಕೆ ಆಹ್ವಾನಿಸಿದ್ದೇವೆ. ತಳಿ ಸಂರಕ್ಷಿಸಿರುವವರೇ, ತಳಿಗಳನ್ನು ಪ್ರದರ್ಶಿಸಿ ಮಾಹಿತಿ ಹಂಚಿಕೊಳ್ಳಲಿದ್ದಾರೆ’ ಎಂದು ಜಿ.ಟಿ.ಪುತ್ರ ಮಾಹಿತಿ ನೀಡಿದರು.
ಮೇಳದ ವೈಶಿಷ್ಟ್ಯ
ರಾಜ್ಯದ ವಿವಿಧ ಪ್ರದೇಶಗಳಲ್ಲಿರುವ ಕೆಂಪು ಮಣ್ಣು, ಕಪ್ಪು ಮಣ್ಣು, ಜಂಬಿಟ್ಟಿಗೆ(ಲ್ಯಾಟರೈಟ್) ಸೇರಿದಂತೆ ಹಲವು ರೀತಿಯ ಮಣ್ಣಿನ ಮಾದರಿಗಳ ‘ಮ್ಯೂಸಿಯಂ’ ಮೇಳದಲ್ಲಿರಲಿದೆ.
ಶಿಲೆಯಿಂದ ಮಣ್ಣಾಗುವವರೆಗೂ, ಮಣ್ಣು ರೂಪುಗೊಳ್ಳುವ ವಿಧಾನವನ್ನು ವಿವರಿಸುವ ಮಾದರಿಗಳಿರುತ್ತವೆ. ವಿವಿಧ ಬಣ್ಣಗಳ ಮಣ್ಣಿನ ಸೃಷ್ಟಿಯ ಹಿಂದಿನ ವಿಜ್ಞಾನವನ್ನೂ ಇಲ್ಲಿ ವಿವರಿಸಲಾಗುತ್ತದೆ. ಈ ಮೂಲಕ ಬೆಳೆ ಬೆಳೆಯುವ ಮೂಲ ವಸ್ತುವಾದ ಮಣ್ಣಿನ ಮಹತ್ವದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೃಷಿ ಅಧಿಕಾರಿಗಳು ವಿವರಿಸಿದರು.
ಮರೆತುಹೋದ ಹಣ್ಣುಗಳು ಮತ್ತು ತಿಂಡಿ–ತಿನಿಸುಗಳ ತಯಾರಿಗಾಗಿ ರಾಜ್ಯದಾದ್ಯಂತ ಪಾಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮೇಳದಲ್ಲೂ ಸಿರಿಧಾನ್ಯಗಳಿಂದ ವೈವಿಧ್ಯಮಯ ಆಹಾರ ತಯಾರಿಸುವ ‘ಪಾಕ ಸ್ಪರ್ಧೆ’ಯೂ ನಡೆಯಲಿದೆ. ಮರೆತುಹೋಗಿರುವ ಸ್ಥಳೀಯ ಆಹಾರವನ್ನು ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಪುತ್ರ ವಿವರಿಸಿದರು.
ಮೇಳದ ಇನ್ನಷ್ಟು ವೈಶಿಷ್ಟ್ಯ
* ಜರ್ಮನಿ ಸ್ವಿಟ್ಜರ್ಲೆಂಡ್ ಅಮೆರಿಕ ಸ್ಪೇನ್ ಆಸ್ಟ್ರೇಲಿಯಾ ಕೀನ್ಯಾ ತಾಂಜೇನಿಯಾ ಸೇರಿದಂತೆ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ
* ಅಂತರರಾಷ್ಟ್ರಿಯ ಮಟ್ಟದ 16 ಭಾಷಣಕಾರರು ಪಾಲ್ಗೊಳ್ಳುವರು
* ಭಾರತದ ಎಲ್ಲ ರಾಜ್ಯಗಳನ್ನು ಆಹ್ವಾನಿಸಲಾಗಿದೆ. 25 ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ
* ಜ.19ರಂದು ಹೆಬ್ಬಾಳದಲ್ಲಿ ಕಾರ್ಯಕ್ರಮದ ಪೂರ್ವಭಾವಿಯಾಗಿ ಮ್ಯಾರಥಾನ್ ಆಯೋಜಿಸಲಾಗಿದ್ದು ಈಗಾಗಲೇ ಎರಡು ಸಾವಿರ ಮಂದಿ ನೋಂದಾಯಿಸಿಕೊಂಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.