ADVERTISEMENT

ಕೃಷಿ ವಿ.ವಿಯಿಂದ ‘ಸಲಹೆಗೆ ಶುಲ್ಕ’

ಕೃಷಿ ಕ್ಷೇತ್ರಕ್ಕೆ ಬರುವ ಐ.ಟಿ ಉದ್ಯೋಗಸ್ಥರಿಗೆ, ಹೊಸಬರಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 19:02 IST
Last Updated 30 ಆಗಸ್ಟ್ 2025, 19:02 IST
<div class="paragraphs"><p>ಜಿಕೆವಿಕೆ</p></div>

ಜಿಕೆವಿಕೆ

   

ಬೆಂಗಳೂರು: ಕೃಷಿಯನ್ನು ವೃತ್ತಿಯನ್ನಾಗಿ ಮಾಡಿಕೊಳ್ಳುವ ನಗರವಾಸಿಗಳಿಗೆ, ಹೊಸಬರಿಗೆ, ಐ.ಟಿ ಕ್ಷೇತ್ರದಲ್ಲಿ ಇರುವವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಶುಲ್ಕ ಸಹಿತ ಸಲಹೆಗಳನ್ನು (ಪೇಯ್ಡ್‌ ಕನ್ಸಲ್ಟೇಷನ ಸರ್ವೀಸ್) ನೀಡುವ ಯೋಜನೆ ಪರಿಚಯಿಸುತ್ತಿದೆ. 

ಹೊಸದಾಗಿ ಕೃಷಿ ಮಾಡುವ ಆಸಕ್ತರ ಜಮೀನಿನ ಗಾತ್ರ, ಸ್ವರೂಪ ಹಾಗೂ ಅವರು ಹೂಡಿಕೆ ಮಾಡುವ ಸಾಮರ್ಥ್ಯದ ಮೇಲೆ ಯಾವ ಬೆಳೆಯನ್ನು ಬೆಳೆಯಬೇಕು ಎಂಬ ಸಮಗ್ರ ಯೋಜನೆಯನ್ನು ಸಿದ್ಧಪಡಿಸಿ, ನೀಡಲಾಗುತ್ತದೆ. ಇದಕ್ಕೆ ಇಂತಿಷ್ಟು ಎಂದು ಶುಲ್ಕ ನಿಗದಿಪಡಿಸಲಾಗುತ್ತದೆ. 

ADVERTISEMENT

‘ಎರಡು ಎಕರೆ ಜಮೀನಿನಲ್ಲಿ ₹5ಲಕ್ಷ ಹೂಡಿಕೆ ಮಾಡಿ ಕೃಷಿ ಪ್ರಾರಂಭಿಸಬೇಕಿದ್ದರೆ, ₹5 ಲಕ್ಷದಲ್ಲಿ ಯಾವ ಕೃಷಿ ಮಾಡಬಹುದು. ಅದಕ್ಕೆ ಬೇಕಾದ ರೂಪರೇಷಗಳ ಯೋಜನೆಯೊಂದನ್ನು ರೂಪಿಸಿ ನೀಡಲಾಗುತ್ತದೆ. ಯಾವ ಸಂದರ್ಭದಲ್ಲಿ ಏನು ಬೆಳೆಯಬೇಕು. ಯಾವ ಗೊಬ್ಬರ ಹಾಕಬೇಕು. ಬೆಳೆ ನಿರ್ವಹಣೆ ಹೇಗೆ ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗುತ್ತದೆ. ನಿರಂತರವಾಗಿ ಆದಾಯ ಬರುವಂತಹ ವಾಣಿಜ್ಯ ಕೃಷಿಗೆ ಬೇಕಾದ ಯೋಜನೆಯನ್ನು ನೀಡಲಾಗುತ್ತದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಕುಲಪತಿ ಎಸ್.ವಿ. ಸುರೇಶ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕೃಷಿ ವಿಶ್ವವಿದ್ಯಾಲಯ ಸಿದ್ಧಪಡಿಸಿ ನೀಡುವ ಯೋಜನೆಯ ಪ್ರಕಾರವೇ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಬೆಳೆ ನಿರ್ವಹಣೆಯ ಸಂದರ್ಭದಲ್ಲಿ ಏನಾದರೂ ಸಮಸ್ಯೆಗಳಾದರೆ, ಕೃಷಿ ವಿಜ್ಞಾನಿಗಳ ತಂಡ ಜಮೀನಿಗೆ ಭೇಟಿ ನೀಡಿ, ಸಲಹೆ ಸೂಚನೆಗಳನ್ನು ನೀಡಲಿದೆ. ಪ‍್ರತಿಯೊಂದಕ್ಕೂ ಶುಲ್ಕ ನಿಗದಿಪಡಿಸಲಾಗುತ್ತದೆ. ಕೃಷಿ ಕ್ಷೇತ್ರಕ್ಕೆ ಹೊಸದಾಗಿ ಬರುವ ಆಸಕ್ತರಿಗೆ ಹಾಗೂ ಬಂಡವಾಳ ಹೂಡಿಕೆ ಮಾಡುವವರಿಗೆ ಈ ಯೋಜನೆ ಸಹಾಯಕವಾಗಲಿದೆ’ ಎಂದು ಮಾಹಿತಿ ನೀಡಿದರು.  

‌‘ನಾವು ಆದಾಯ ಗಳಿಸುವ ಉದ್ದೇಶದಿಂದ ಈ ಸೇವೆಯನ್ನು ಪ್ರಾರಂಭಿಸುತ್ತಿಲ್ಲ. ಹೊಸಬರು ಕೃಷಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂಬ ಉದ್ದೇಶದಿಂದ ಶುಲ್ಕ ನಿಗದಿಪಡಿಸುತ್ತಿದ್ದೇವೆ. ಈಗಾಗಲೇ ಬೇರೆ–ಬೇರೆ ಕ್ಷೇತ್ರಗಳಲ್ಲಿ ಶುಲ್ಕ ಸಹಿತ ಸಲಹೆಗಳನ್ನು ನೀಡಲಾಗುತ್ತಿದೆ. ಅದೇ ರೀತಿಯಲ್ಲಿ ಕೃಷಿ ಕ್ಷೇತ್ರದಲ್ಲಿಯೂ ಶುಲ್ಕ ಪಡೆದು ಸಲಹೆ ಸೂಚನೆಗಳನ್ನು ನೀಡುವ ಯೋಜನೆಯನ್ನು ರೂಪಿಸುತ್ತಿದ್ದೇವೆ’ ಎಂದು ವಿವರಿಸಿದರು.  

ಬೆಂಗಳೂರಿನಂತಹ ಮಹಾನಗರಗಳಲ್ಲಿ ವಾರಾಂತ್ಯದ ಕೃಷಿಕರು ಇದ್ದಾರೆ. ಇವರು ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹಳ್ಳಿಗಳಿಗೆ ತೆರಳುತ್ತಾರೆ. ಶನಿವಾರ ಹಾಗೂ ಭಾನುವಾರ ಎರಡು ದಿನ ಕೃಷಿ ಚಟುವಟಿಕೆಗಳನ್ನು ಮಾಡುತ್ತಾರೆ. ಭಾನುವಾರ ರಾತ್ರಿ ಮತ್ತೆ ಬೆಂಗಳೂರಿಗೆ ಬರುತ್ತಾರೆ. ಈ ರೀತಿ ಮಾಡುವುದರಿಂದ ಕೃಷಿ ಕ್ಷೇತ್ರದಿಂದ ಹೆಚ್ಚು ಆದಾಯ ಬರುವುದಿಲ್ಲ. ಕೃಷಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳಬೇಕು. ಆದ್ದರಿಂದ ನಾವು ಶುಲ್ಕ ಪಡೆದು ಕೃಷಿ ಸಲಹೆಗಳನ್ನು ನೀಡುತ್ತೇವೆ’ ಎಂದರು.

ಎರಡು ತಿಂಗಳಲ್ಲಿ ಜಾರಿ’

ಎರಡು ತಿಂಗಳಲ್ಲಿ ಶುಲ್ಕ ಸಹಿತ ಕೃಷಿ ಸಲಹೆ ಯೋಜನೆ ಜಾರಿಯಾಗಲಿದೆ. ಜಿಕೆವಿಕೆ ವ್ಯಾಪ್ತಿಯ ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಬೆಂಗಳೂರು ದಕ್ಷಿಣ (ರಾಮನಗರ) ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸುವ ಉದ್ದೇಶವಿದೆ. ಇದಕ್ಕೆ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ವಿಜ್ಞಾನಿಗಳನ್ನು  ಬಳಸಿಕೊಳ್ಳಲಾಗುತ್ತದೆ’ ಎಂದು ಎಸ್.ವಿ. ಸುರೇಶ ಹೇಳಿದರು.  ‘ಈ ಸೇವೆ ಆರಂಭಿಸಲು ತಜ್ಞರ ಸಮಿತಿಯೊಂದನ್ನು ರಚಿಸಿ ರೈತರ ಅವಶ್ಯಕತೆಗಳಿಗೆ ಅನುಗುಣವಾಗಿ ಸೇವೆ ನೀಡಲು ತಜ್ಞರನ್ನು ನಿಯೋಜಿಸಬೇಕಾಗುತ್ತದೆ. ಶುಲ್ಕ ನಿಗದಿ ಸೇವೆಗಳ ವಿವರ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಿ ಮಾರ್ಗಸೂಚಿಯನ್ನು ಸಿದ್ದಪಡಿಸಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ: 63604 66004 94817 335592 ಸಂಪರ್ಕಿಸಬಹುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.