ADVERTISEMENT

‘ಅನ್ವೇಷಣಾ’ಕ್ಕೆ ಸಂಶೋಧನಾಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 15:46 IST
Last Updated 6 ಫೆಬ್ರುವರಿ 2025, 15:46 IST
<div class="paragraphs"><p>ಸಸಾಂದರ್ಭಿಕ ಚಿತ್ರ</p></div>

ಸಸಾಂದರ್ಭಿಕ ಚಿತ್ರ

   

ಬೆಂಗಳೂರು: ಆವಿಷ್ಕಾರಗಳನ್ನು ಉತ್ತೇಜಿಸಲು, ಯುವ ವಿಜ್ಞಾನಿಗಳನ್ನು ಬೆಂಬಲಿಸಲು ಸುಧಾರಿತ ವಿಜ್ಞಾನ ಸಂಶೋಧನಾ ಯೋಜನೆಗಳಲ್ಲಿ ಭಾಗವಹಿಸಲು 9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

‘ಪ್ರಯೋಗ’ ಸಂಶೋಧನಾ ಸಂಸ್ಥೆಯ ವಿಜ್ಞಾನ ಸಂಶೋಧನಾ ಕಾರ್ಯಕ್ರಮವಾದ ‘ಅನ್ವೇಷಣಾ’ ಮೂಲಕ ಹಸಿರು ರಸಾಯನ ವಿಜ್ಞಾನ, ಭೂ ವಿಜ್ಞಾನ, ಕೃಷಿ ವಿಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಅಧ್ಯಯನಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದೆ. ಇಲ್ಲಿಯವರೆಗೆ ಮೂರು ಆವೃತ್ತಿಗಳಲ್ಲಿ 60 ವಿದ್ಯಾರ್ಥಿಗಳನ್ನು ಒಳಗೊಂಡ 20 ಸಂಶೋಧನಾ ಯೋಜನೆಗಳು ಪೂರ್ಣಗೊಂಡಿವೆ. ಈ ವಿದ್ಯಾರ್ಥಿಗಳು ಹಾರ್ವರ್ಡ್‌, ಆಕ್ಸ್‌ಫರ್ಡ್‌ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ನಿಯತಕಾಲಿಕಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಎಂದು ‘ಪ್ರಯೋಗ’ ತಿಳಿಸಿದೆ.

ADVERTISEMENT

ಈ ಬಾರಿ ‘ಅನ್ವೇಷಣಾ’ದ ನಾಲ್ಕನೇ ಆವೃತ್ತಿ ನಡೆಯಲಿದೆ. ವಿಜ್ಞಾನದ ಬಗ್ಗೆ ಆಸಕ್ತಿ ಹೊಂದಿರುವ, ವೈಜ್ಞಾನಿಕ ಸಂಶೋಧನೆಯಲ್ಲಿ ವೃತ್ತಿ ಜೀವನ ನಡೆಸಲು ಬಯಸುವ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮ ವಿನ್ಯಾಸಗೊಳಿಸಲಾಗಿದೆ. ಫೆಬ್ರುವರಿ 24ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಭಾರತದ ಎಲ್ಲ ರಾಜ್ಯಗಳಿಂದ ಅರ್ಜಿ ಸಲ್ಲಿಸಲು ಮುಕ್ತ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಿದವರನ್ನು ಕಿರುಪಟ್ಟಿ ಮಾಡಿ ಮಾರ್ಚ್‌ 6 ಮತ್ತು 7ರಂದು ಸಂದರ್ಶನ ನಡೆಸಲಾಗುವುದು. 

ಯೋಜನೆಗಳು ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿವೆ. ಆಗಸ್ಟ್‌ನಲ್ಲಿ ‘ಪ್ರಯೋಗ’ ಕ್ಯಾಂಪಸ್‌ನಲ್ಲಿ ಮೌಖಿಕ ಪರೀಕ್ಷೆ ನಡೆಸಿ, ಪ್ರಮಾಣಪತ್ರ ನೀಡುವ ಮೂಲಕ ಕಾರ್ಯಕ್ರಮ ಕೊನೆಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಮತ್ತು ಶಾಲೆಗಳಿಗೆ ಯಾವುದೇ ಶುಲ್ಕಗಳಿರುವುದಿಲ್ಲ. ಆಸಕ್ತರು www.prayoga.org.in/anveshana ಮೂಲಕ ಅರ್ಜಿ ಸಲ್ಲಿಸಬಹುದು. ವಿವರಗಳು ಮತ್ತು ಪ್ರಶ್ನೆಗಳಿದ್ದರೆ anveshana@prayoga.org.in ಸಂಪರ್ಕಿಸುವಂತೆ ‘ಪ್ರಯೋಗ’ ಸಂಸ್ಥೆ ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.