ಬೆಂಗಳೂರು: ಪ್ರಥಮ ವರ್ತಮಾನ ವರದಿಯಲ್ಲಿ (ಎಫ್‌ಐಆರ್) ಹಾಗೂ ತನಿಖೆಯಲ್ಲಿ ಭಾರತ ನ್ಯಾಯ ಸಂಹಿತೆಯ ಸೆಕ್ಷನ್ 304, 103(2), 111 ಹಾಗೂ 113(ಬಿ) ಅನ್ನು ಅಳವಡಿಸಿಕೊಳ್ಳುವ ಮುನ್ನ ಎಲ್ಲ ಠಾಣೆಗಳ ತನಿಖಾಧಿಕಾರಿಗಳು ತಮ್ಮ ವ್ಯಾಪ್ತಿಯ ಮೇಲಧಿಕಾರಿಗಳ ಅನುಮೋದನೆ ಪಡೆದುಕೊಳ್ಳಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಅವರು ಆದೇಶದಲ್ಲಿ ತಿಳಿಸಿದ್ದಾರೆ.
304 (ಚರ ಆಸ್ತಿಯನ್ನು ದೋಚುವುದು ಅಥವಾ ಕಸಿದುಕೊಳ್ಳುವುದು), 103(2) (ನಿರ್ದಿಷ್ಟವಾಗಿ ಜನಾಂಗ, ಜಾತಿ, ಸಮುದಾಯ, ಲಿಂಗ, ಜನ್ಮಸ್ಥಳ, ಭಾಷೆ ಅಥವಾ ವೈಯಕ್ತಿಕ ನಂಬಿಕೆಯಂತಹ ಅಂಶಗಳ ಆಧಾರದಲ್ಲಿ ಐದು ಅಥವಾ ಅದಕ್ಕಿತ ಹೆಚ್ಚು ವ್ಯಕ್ತಿಗಳ ಗುಂಪು ಒಟ್ಟಾಗಿ ವರ್ತಿಸಿ ಮಾಡುವ ಹತ್ಯೆ), 111 (ಸಂಘಟಿತ ಅಪರಾಧ, ಇಬ್ಬರು ಅಥವಾ ಹೆಚ್ಚಿನವರ ಗುಂಪು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗುವುದು), 113(ಬಿ) (ಭಾರತದ ಏಕತೆ, ಸಮಗ್ರತೆ, ಸಾರ್ವಭೌಮತ್ವ, ಭದ್ರತೆ ಅಥವಾ ಆರ್ಥಿಕ ಭದ್ರತೆಗೆ ಬೆದರಿಕೆ ಹಾಕುವ ಉದ್ದೇಶ ಹೊಂದಿರುವ ಕೃತ್ಯಗಳಲ್ಲಿ ಭಾಗಿ ಆಗುವುದು). ಈ ಸೆಕ್ಷನ್‌ಗಳನ್ನು ಅಳವಡಿಸಿಕೊಳ್ಳುವ ಮುನ್ನ ಮೇಲಾಧಿಕಾರಿಗಳ ಅನುಮತಿ ಪಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಜಿಲ್ಲಾಮಟ್ಟದಲ್ಲಿ ಎಸ್‌ಪಿ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿಯನ್ನೂ ಒಳಗೊಂಡ ಮೇಲಾಧಿಕಾರಿಯಿಂದ ಲಿಖಿತ ಅನುಮತಿ ಪಡೆದಿರಬೇಕು. ತುರ್ತು ಕಾರ್ಯಗಳ ನಿಮಿತ್ತ ಮೌಖಿಕವಾಗಿ ಆದೇಶ ಪಡೆದರೆ, 24 ಗಂಟೆ ಒಳಗೆ ಲಿಖಿತ ಅನುಮತಿ ಪಡೆಯಬೇಕು. ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲಿಸಿ ಅನುಮೋದನೆ ನೀಡಿದ ನಂತರ ಆ ಕಾಯ್ದೆಗಳಡಿ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆಯಲ್ಲಿ ಇರುವ ಕೆಲವು ಕಾಯ್ದೆಗಳು ದುರ್ಬಳಕೆ ಆಗುವುದನ್ನು ತಡೆಗಟ್ಟಲು ಈ ಕ್ರಮಕ್ಕೆ ಇಲಾಖೆ ಮುಂದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.