ಬೆಂಗಳೂರು: ‘ಕಾಂತರಾಜ ನೇತೃತ್ವದ ಆಯೋಗದ ವರದಿ ಅವೈಜ್ಞಾನಿಕ, ನಮ್ಮ ಸಮುದಾಯದ ಜನಸಂಖ್ಯೆ ಕೋಟಿ ಮೇಲಿದೆ ಎಂದು ಹಲವು ಸಮುದಾಯಗಳು ಹೇಳಿಕೊಳ್ಳುತ್ತಿವೆ. ಆದರೆ, ಈ ಸಂಖ್ಯೆಗಳನ್ನೆಲ್ಲ ನೋಡಿದರೆ ರಾಜ್ಯದ ಜನಸಂಖ್ಯೆ 7 ಕೋಟಿ ಬದಲು 15 ಕೋಟಿ ತಲುಪಲಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾನುವಾರ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವಿವಿಧ ಸಮುದಾಯಗಳ ಜನಸಂಖ್ಯೆ ಸಾವಿರ, ಲಕ್ಷಗಳಲ್ಲಿ ಇರುವುದನ್ನು ಒಪ್ಪಲು ಯಾರೂ ಸಿದ್ಧರಿಲ್ಲದೇ ಇರುವುದೇ ಸಮಸ್ಯೆಯಾಗಿದೆ’ ಎಂದರು.
ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಸಮಾನತೆ ಇರಬಾರದು. ಎಲ್ಲರಿಗೂ ಸಮನಾಗಿ ಸವಲತ್ತು ಸಿಗುವಂತಿರಬೇಕು. ಯಾವ ಸಮುದಾಯದ ಜನಸಂಖ್ಯೆ ಎಷ್ಟಿದೆ ಎಂದು ನಿಖರವಾಗಿ ತಿಳಿಯಬೇಕಿದ್ದರೆ ಜಾತಿ ಜನಗಣತಿ ವರದಿ ಅಗತ್ಯ ಎಂದು ಪ್ರತಿಪಾದಿಸಿದರು.
ಬಸವಾದಿ ಶರಣರು, ಬುದ್ಧ ಮತ್ತು ಅಂಬೇಡ್ಕರ್ ಅವರು ಹೇಳಿದ ಸಮ- ಸಮಾಜದ ನಿರ್ಮಾಣಕ್ಕಾಗಿ ಪ್ರತಿ ಸಮುದಾಯಗಳಿಗೂ ಆದ್ಯತೆ ನೀಡಬೇಕು. ಆಗ ಮಾತ್ರ ಸಮ ಸಮಾಜದ ಕನಸು ಸಾಕಾರಗೊಳ್ಳಲು ಸಾಧ್ಯ ಎಂದು ಹೇಳಿದರು.
‘ಉಪ್ಪಾರ ನಿಗಮಕ್ಕೆ ಪ್ರಸ್ತುತ ನಾನೇ ಅಧ್ಯಕ್ಷ. ಎರಡು ತಿಂಗಳಲ್ಲಿ ಹೊಸ ಅಧ್ಯಕ್ಷರ ನೇಮಕವಾಗಲಿದೆ. ಪ್ರಸಕ್ತ ವರ್ಷ ನಿಗಮಕ್ಕೆ ₹ 42 ಕೋಟಿ ಅನುದಾನ ನೀಡಲಾಗಿದೆ. ಇಷ್ಟು ಅನುದಾನವನ್ನು ಯಾವುದೇ ಪಕ್ಷದ ಸರ್ಕಾರವೂ ನೀಡಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ನಿಗಮಗಳಿಗೆ ಒಟ್ಟು ₹ 1,600 ಕೋಟಿ ಅನುದಾನ ಒದಗಿಸಿದ್ದಾರೆ’ ಎಂದು ಮಾಹಿತಿ ನೀಡಿದರು.
ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎನ್. ರವೀಂದ್ರನಾಥ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಯು.ವೆಂಕೋಬ, ಉಪ್ಪಾರ ಸಂಘದ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಎನ್. ಸುನೀಲ್ ಕುಮಾರ್, ಪ್ರಾಧ್ಯಾಪಕ ಸಂಗಮೇಶ್ ಎಸ್.ಗಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯಿತ್ರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.