ADVERTISEMENT

‘ಐಸೆಕ್‌ ನಿರ್ದೇಶಕ ಹುದ್ದೆಗೆ ಸೇವಾ ಹಿರಿತನ ಪರಿಗಣಿಸಿ’

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 19:30 IST
Last Updated 12 ಏಪ್ರಿಲ್ 2021, 19:30 IST

ಬೆಂಗಳೂರು: ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆಗೆ (ಐಸೆಕ್‌) ಸೇವಾ ಹಿರಿತನವನ್ನು ಕಡೆಗಣಿಸಿ ಉಸ್ತುವಾರಿ ನಿರ್ದೇಶಕರನ್ನು ನೇಮಕ ಮಾಡಲಾಗಿದೆ ಎಂದು ಸಂಸ್ಥೆಯ ನಿವೃತ್ತ ನಿರ್ದೇಶಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಡಾ. ಮಾದೇಶ್ವರನ್‌ ಅವರ ವರ್ಗಾವಣೆಯ ನಂತರ ಡಾ. ಪ್ರಮೋದ್‌ಕುಮಾರ್‌ ಎಂಬುವರಿಗೆ ಸಂಸ್ಥೆಯ ಉಸ್ತುವಾರಿ ನಿರ್ದೇಶಕರ ಹೊಣೆ ನೀಡಲಾಗಿದೆ. ಆದರೆ, ಇವರಿಗಿಂತ ಸೇವಾ ಹಿರಿತನದಲ್ಲಿ ಮತ್ತು ಹೆಚ್ಚು ಪಾಂಡಿತ್ಯ ಹೊಂದಿರುವ ಡಾ. ರಾಜಶೇಖರ್‌ ಅವರನ್ನು ಕಡೆಗಣಿಸಲಾಗಿದೆ’ ಎಂದು ಐಸೆಕ್‌ ನಿವೃತ್ತ ನಿರ್ದೇಶಕ ಪ್ರೊ.ಎಂ.ಜಿ. ಚಂದ್ರಕಾಂತ್‌ ದೂರಿದರು.

‘ಐಸೆಕ್‌ 1972ರಲ್ಲಿ ಸ್ಥಾಪಿಸಲ್ಪಟ್ಟ ಪ್ರತಿಷ್ಠಿತ ಸಮಾಜ ವಿಜ್ಞಾನಗಳ ಅಧ್ಯಯನ ಸಂಸ್ಥೆ. ಈ ಸಂಸ್ಥೆಗೆ ರಾಜ್ಯ ಸರ್ಕಾರವು ಶೇ 55ರಷ್ಟು ಅನುದಾನ ನೀಡಿದರೆ, ಕೇಂದ್ರ ಸರ್ಕಾರವು ಶೇಕಡಾ 45ರಷ್ಟು ಅನುದಾನ ನೀಡುತ್ತಿದೆ. ಇಂತಹ ಸಂಸ್ಥೆಗೆ ನಡೆಯುವ ನೇಮಕಾತಿಗಳು ಹೆಚ್ಚು ಪಾರದರ್ಶಕವಾಗಿರಬೇಕು. ಸಾಮಾನ್ಯವಾಗಿ ಉಸ್ತುವಾರಿ ನಿರ್ದೇಶಕರೇ ಮುಂದೆ ಕಾಯಂ ನಿರ್ದೇಶಕರಾಗುವ ಸಂಪ್ರದಾಯವಿದೆ’ ಎಂದೂ ಅವರು ಹೇಳಿದರು.

ADVERTISEMENT

‘ರಾಜಶೇಖರ್‌ ಅವರ ಸೇವಾವಧಿ ಒಂದು ವರ್ಷವಿದೆ. ಅಲ್ಲದೆ, ಅವರು ನಿರ್ದೇಶಕ ಹುದ್ದೆಗೆ ಎಲ್ಲ ರೀತಿಯಿಂದಲೂ ಅರ್ಹರಾಗಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಪ್ರೊ. ಪ್ರಮೋದ್‌ಕುಮಾರ್‌ ಅವರನ್ನು ಉಸ್ತುವಾರಿ ನಿರ್ದೇಶಕರಾಗಿ ನೇಮಕ ಮಾಡಿ ಸಂಸ್ಥೆಯ ಕುಲಸಚಿವರು ಹೊರಡಿಸಿರುವ ಅಧಿಸೂಚನೆ ಗಮನಿಸಿದೆ. ಸಂಸ್ಥೆಯ ಬೈಲಾ ಪ್ರಕಾರ ತಾಂತ್ರಿಕವಾಗಿ ಇದು ತಪ್ಪು. ಏಕೆಂದರೆ, ಸಂಸ್ಥೆಯಲ್ಲಿ ಉಸ್ತುವಾರಿ ನಿರ್ದೇಶಕ ಎಂಬ ಹುದ್ದೆಯೇ ಇಲ್ಲ. ಬೇಕಿದ್ದರೆ ಹಂಗಾಮಿ ನಿರ್ದೇಶಕ ಎಂದು ನೇಮಕ ಮಾಡಬಹುದು’ ಎಂದು ಐಸೆಕ್‌ ನಿವೃತ್ತ ನಿರ್ದೇಶಕ ಪ್ರೊ. ಗೋಪಾಲ್ ಕಡೆಕೋಡಿ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆಗಾಗಿ ಪ್ರೊ. ಪ್ರಮೋದ್‌ ಕುಮಾರ್ ಅವರನ್ನು ಸಂಪರ್ಕಿಸಲಾಯಿತು. ಆದರೆ, ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.