ADVERTISEMENT

ಸಚಿವ ಅಶ್ವತ್ಥನಾರಾಯಣ ಜತೆ ಇಸ್ರೇಲ್ ನಿಯೋಗದ ಮಾತುಕತೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 20:58 IST
Last Updated 6 ಏಪ್ರಿಲ್ 2022, 20:58 IST
ಇಸ್ರೇಲ್‌ನ ನ್ಯಾಷನಲ್ ಡಿಫೆನ್ಸ್ ಕಾಲೇಜಿನ ನಿಯೋಗದ ಸದಸ್ಯರು ವಿಕಾಸಸೌಧದಲ್ಲಿ ಬುಧವಾರ ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು
ಇಸ್ರೇಲ್‌ನ ನ್ಯಾಷನಲ್ ಡಿಫೆನ್ಸ್ ಕಾಲೇಜಿನ ನಿಯೋಗದ ಸದಸ್ಯರು ವಿಕಾಸಸೌಧದಲ್ಲಿ ಬುಧವಾರ ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು   

ಬೆಂಗಳೂರು:ಇಸ್ರೇಲ್‌ ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಉನ್ನತ ನಿಯೋಗವು ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಬುಧವಾರ ಭೇಟಿಯಾಗಿ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ನವೋದ್ಯಮ ಕಾರ್ಯ ಪರಿಸರ ಕುರಿತು ವಿಚಾರ ವಿನಿಮಯ ನಡೆಸಿತು.

ವಿಕಾಸಸೌಧದಲ್ಲಿ ನಡೆದ ಭೇಟಿಯಲ್ಲಿ ಸಚಿವರು, ರಾಜ್ಯದಲ್ಲಿರುವ ಐಟಿ, ಬಿಟಿ, ನವೋದ್ಯಮ ಮತ್ತು ರಕ್ಷಣಾ ಸಂಶೋಧನೆ ಹಾಗೂ ತಂತ್ರಜ್ಞಾನದ ಕುರಿತು ಹಲವು ವಿಚಾರಗಳನ್ನು ಆ ದೇಶದ ನಿಯೋಗದೊಂದಿಗೆ ಹಂಚಿಕೊಂಡರು.

ಈ ಸಂದರ್ಭದಲ್ಲಿ ಇಸ್ರೇಲ್ ನಿಯೋಗದ ಸದಸ್ಯರು, ತಮ್ಮ ದೇಶದಲ್ಲಿರುವ ನ್ಯಾಷನಲ್ ಡಿಫೆನ್ಸ್ ಕಾಲೇಜಿನಲ್ಲಿ ಒಂದು ಶೈಕ್ಷಣಿಕ ವರ್ಷದ ಅವಧಿ
ಯಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಭದ್ರತೆ, ಅಂತರರಾಷ್ಟ್ರೀಯ ಸಂಬಂಧ ಗಳು, ವಿಶ್ವಸಂಸ್ಥೆ, ಐರೋಪ್ಯ ಒಕ್ಕೂಟ, ಅಮೆರಿಕ ಮತ್ತು ನ್ಯಾಟೋ ಮುಂತಾದ ವಿಷಯಗಳನ್ನು ಕುರಿತು ನಾಲ್ಕು ಹಂತಗಳಲ್ಲಿ ಹೇಗೆ ಬೋಧನೆ ಮಾಡಲಾಗುತ್ತದೆ ಎನ್ನುವುದನ್ನು ವಿವರಿಸಿದರು.

ADVERTISEMENT

ಕರ್ನಾಟಕದಲ್ಲಿ ನವೋದ್ಯಮವು ದೃಢವಾಗಿ ಬೆಳೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಿಯೋಗವು ರಾಜ್ಯಕ್ಕೆ ಅಗತ್ಯ ನೆರವು ಮತ್ತು ಮಾರ್ಗದರ್ಶನ ನೀಡುವುದಾಗಿ ಹೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ ಅವರು, ರಾಜ್ಯದಲ್ಲಿ ನವೋದ್ಯಮವು ಶಕ್ತಿಶಾಲಿಯಾಗಿ ಬೆಳೆಯುತ್ತಿರುವುದು ಮತ್ತು 34ಕ್ಕೂ ಹೆಚ್ಚಿನ ನವೋದ್ಯಮ ಕಂಪನಿಗಳು ಯೂನಿಕಾರ್ನ್ ಸ್ಥಾನಮಾನ ಹೊಂದಿರುವುದನ್ನು ಇಸ್ರೇಲ್ ನಿಯೋಗದ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ನಿಯೋಗದ ಪ್ರತಿನಿಧಿಗಳು ಮಾತನಾಡಿ, ಕಳೆದ 30 ವರ್ಷಗಳಿಂದ ಈಚೆಗೆ ಭಾರತ ಮತ್ತು ಇಸ್ರೇಲ್ ನಡುವೆ ದ್ವಿಪಕ್ಷೀಯ ರಾಜತಾಂತ್ರಿಕ ಬಾಂಧವ್ಯ ಮತ್ತು ರಕ್ಷಣಾ ಸಹಕಾರ ಹೇಗೆ ವೃದ್ಧಿಸಿಕೊಂಡು ಬಂದಿದೆ ಎನ್ನುವ ಬಗ್ಗೆ ವಿವರಿಸಿದರು.

ಇಸ್ರೇಲ್ ನಿಯೋಗದಲ್ಲಿ ಕರ್ನಲ್ ಯೆಹೂದಾ ಯೋಹನಾನಾಫ್, ಕರ್ನಲ್ ಸ್ಯಾಮ್ಯುಯೆಲ್ ಬೌಮೆನ್ಡಿಲ್, ಅಲ್ಲಿನ ಪ್ರಧಾನಮಂತ್ರಿಗಳ ಕಚೇರಿಯ ಉನ್ನತಾಧಿಕಾರಿ ಶಾಯ್ ಜೊಂಟ್ಯಾಗ್, ಕಮಾಂಡರ್ ನಾವಾ ಬ್ಯಾರಿನಾ ಬೆನ್ ಸಹರ್, ಲೆಫ್ಟಿನೆಂಟ್‌ ಕರ್ನಲ್‌ ಕೆಲ್ಲಿ ಬೊರುಕ್ ಹುವಿಚ್ ಮತ್ತು ಬಿಲ್ ವ್ಯಾಲೇಸ್, ಅಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿ ಶರೋನ್ ರೆಜೆವ್, ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಅವಿ ಜುಬೈಯಾ ಇದ್ದರು.

ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಿಇಒ ಸಂಜೀವ್ ಗುಪ್ತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.