ADVERTISEMENT

ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್ ಸಂಸ್ಥೆ ಸಂಶೋಧನೆಗೆ ಇಸ್ರೊ ಅನುದಾನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 23:55 IST
Last Updated 19 ಫೆಬ್ರುವರಿ 2026, 23:55 IST
   

ಬೆಂಗಳೂರು: ಮಾನವ ಸಹಿತ ಗಗನಯಾನ ಯೋಜನೆಗಾಗಿ  ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸೂಕ್ಷ್ಮಜೀವಿಗಳ ಮೇಲ್ವಿಚಾರಣಾ ಯೋಜನೆಗೆ ನಗರದ ‘ಪ್ರಯೋಗ’ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್ ಸಂಸ್ಥೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ರೆಸ್ಪಾಂಡ್‌ ಅನುದಾನ ಲಭಿಸಿದೆ.

ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆ ಕೈಗೊಳ್ಳಲು ಅನುದಾನ ನೀಡಲಾಗಿದೆ. ಈ ಯೋಜನೆ ದೇಶದ ಮುಂಬರುವ ಮಾನವ ಸಹಿತ ಬಾಹ್ಯಾಕಾಶ ಕಾರ್ಯಾಚರಣೆಗೆ ಪೂರಕವಾಗಿ ನಡೆಯಲಿದೆ. ಗಗನಯಾತ್ರಿಗಳ ಆರೋಗ್ಯ ಮತ್ತು ಬಾಹ್ಯಾಕಾಶ ನೌಕೆಯ ನೈರ್ಮಲ್ಯಕ್ಕೆ ನಿರ್ಣಾಯಕವಾದ ಸೂಕ್ಷ್ಮಜೀವಿ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಬಲಪಡಿಸುವ ಗುರಿ ಹೊಂದಲಾಗಿದೆ ಎಂದು ಸಂಸ್ಥೆ ತಿಳಿಸಿದೆ. 

ಈ ಯೋಜನೆಯ ನೇತೃತ್ವವನ್ನು ಪ್ರಯೋಗದ ಸಂಶೋಧಕಿ ರಮ್ಯಾ ಪ್ರಭು ವಹಿಸಿದ್ದು, ವೆಂಕಟ ಕೃಷ್ಣ, ಓಂ ಪ್ರಕಾಶ್ ಮತ್ತು ಸಾಯಿ ಹರ್ಷಿಣಿ ತಂಡದಲ್ಲಿರುತ್ತಾರೆ ಎಂದು ಹೇಳಿದೆ.

ADVERTISEMENT

ರಮ್ಯಾ ಪ್ರಭು ಮಾತನಾಡಿ, ‘ಇಸ್ರೊದಿಂದ ಈ ಯೋಜನೆಯನ್ನು ಪಡೆಯಲು ಸಂತೋಷವಾಗಿದೆ. ಬಾಹ್ಯಾಕಾಶ ನೌಕೆಯ ಪರಿಸರದಲ್ಲಿ ಸೂಕ್ಷ್ಮಜೀವಿಯ ಇರುವಿಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ದೀರ್ಘಾವಧಿಯ ಕಾರ್ಯಾಚರಣೆಗಳಲ್ಲಿ ಗಗನಯಾತ್ರಿಗಳ ಸುರಕ್ಷತೆಗಾಗಿ ಈ ಯೋಜನೆ ಅಗತ್ಯ’ ಎಂದರು.

‘ಅತ್ಯಾಧುನಿಕ ಪ್ರಯೋಗಾಲಯ ಹೊಂದಿರುವ 'ಪ್ರಯೋಗ' ಸಂಸ್ಥೆಗೆ, ಇಸ್ರೊದಿಂದ ಯೋಜನೆ ಪಡೆಯುವುದು ಒಂದು ಮಹತ್ವದ ಮೈಲಿಗಲ್ಲು’ ಎಂದು ಪ್ರಯೋಗದ ಸಂಶೋಧನಾ ನಿರ್ದೇಶಕ ಕೆ. ಎಸ್. ನಾಗಭೂಷಣ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.