ADVERTISEMENT

13 ರಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ವಿಚಾರಣೆ

ಎಐಎಡಿಎಂಕೆ ನಾಯಕಿ ಪ್ರಶ್ನಿಸಲಿರುವ ಐ.ಟಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 18:34 IST
Last Updated 7 ಡಿಸೆಂಬರ್ 2018, 18:34 IST
ಶಶಿಕಲಾ
ಶಶಿಕಲಾ   

ಬೆಂಗಳೂರು: ಇಲ್ಲಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಅವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ತಿಂಗಳ 13 ಹಾಗೂ 14ರಂದು ವಿಚಾರಣೆ ನಡೆಸಲಿದ್ದಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಐದು ದಿನ ನಡೆದ ಐ.ಟಿ ದಾಳಿ ವೇಳೆ ವಶಪಡಿಸಿಕೊಳ್ಳಲಾದ ಕೆಲವು ದಾಖಲೆಗಳ ಸಂಬಂಧ ಸ್ಪಷ್ಟನೆ ಪಡೆಯುವ ಅಗತ್ಯವಿರುವುದರಿಂದ ಶಶಿಕಲಾ ಅವರ ವಿಚಾರಣೆಗೆ ಜೈಲಿನೊಳಗೆ ಅಗತ್ಯ ಸಿದ್ಧತೆ ಮಾಡುವಂತೆ ಐ.ಟಿ ಇಲಾಖೆ ಗೃಹ ಇಲಾಖೆಗೆ ಪತ್ರ ಬರೆದಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಸಮಯದಲ್ಲಿ ಜಯಾ ಟಿ.ವಿ ಹಾಗೂ ಶಶಿಕಲಾ ಸೋದರ ವಿ.ಕೆ. ದಿವಾಕರನ್‌ ಸೇರಿದಂತೆ ಕುಟುಂಬದ ಸದಸ್ಯರ ಬಳಿ 1,430 ಕೋಟಿ ಅಘೋಷಿತ ಆಸ್ತಿಪಾಸ್ತಿ ಪತ್ತೆಯಾಗಿತ್ತು. ₹ 7 ಕೋಟಿ ನಗದು, ₹ 5 ಕೋಟಿ ಮೊತ್ತದ ಚಿನ್ನ, ಭಾರಿ ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ADVERTISEMENT

ಐದು ದಿನಗಳಲ್ಲಿ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ ಹಾಗೂ ದೆಹಲಿ ಸೇರಿದಂತೆ ಸುಮಾರು 187 ಸ್ಥಳಗಳ ಮೇಲೆ ದಾಳಿ ನಡೆದಿತ್ತು. ಇದಾದ ಒಂದು ವಾರದ ಬಳಿಕ ಮೂರು ಉದ್ಯಮ ಸಂಸ್ಥೆಗಳಿಗೆ ಸೇರಿದ 33 ಸ್ಥಳಗಳಲ್ಲಿ ಶೋಧ ನಡೆದಿತ್ತು. ಶಶಿಕಲಾ ಅವರಿಗೆ ಸೇರಿದ ಮನೆಗಳು ಮಾತ್ರವಲ್ಲ, ಅವರ ಆಪ್ತರ ಮನೆಗಳು ಹಾಗೂ ಕಚೇರಿಗಳ ಮೇಲೂ ದಾಳಿಗಳು ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.