ADVERTISEMENT

ಸಣ್ಣ ಉದ್ಯಮಗಳ ತೊಡಕು ನಿವಾರಣೆ ಅಗತ್ಯ; ಶೋಭಾ ಕರಂದ್ಲಾಜೆ

ಇಂಡಿಯಾ ಎಂಎಸ್‌ಎಂಇ ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 30 ಮೇ 2025, 15:41 IST
Last Updated 30 ಮೇ 2025, 15:41 IST
‘ಇಂಡಿಯಾ ಎಂಎಸ್‌ಎಂಇ ಸಮಾವೇಶ’ದಲ್ಲಿ ಎಂ.ಜಿ. ರಾಜಗೋಪಾಲ್, ಎಂ.ಜಿ. ಬಾಲಕೃಷ್ಣನ, ಡಿ.ಕೆ. ಶಿವಕುಮಾರ್, ಶೋಭಾ ಕರಂದ್ಲಾಜೆ, ಎಂ.ಬಿ. ಪಾಟೀಲ, ಶರಣಬಸಪ್ಪ ದರ್ಶನಾಪುರ ಮತ್ತು ಆರ್. ಶಿವಕುಮಾರ್ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ
‘ಇಂಡಿಯಾ ಎಂಎಸ್‌ಎಂಇ ಸಮಾವೇಶ’ದಲ್ಲಿ ಎಂ.ಜಿ. ರಾಜಗೋಪಾಲ್, ಎಂ.ಜಿ. ಬಾಲಕೃಷ್ಣನ, ಡಿ.ಕೆ. ಶಿವಕುಮಾರ್, ಶೋಭಾ ಕರಂದ್ಲಾಜೆ, ಎಂ.ಬಿ. ಪಾಟೀಲ, ಶರಣಬಸಪ್ಪ ದರ್ಶನಾಪುರ ಮತ್ತು ಆರ್. ಶಿವಕುಮಾರ್ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ದೇಶದಲ್ಲಿಯೇ ಅತಿ ಹೆಚ್ಚು ಉದ್ಯೋಗ ನೀಡಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ತಂತ್ರಜ್ಞಾನ, ಹಣಕಾಸು, ಕೌಶಲಪೂರ್ಣ ಕಾರ್ಮಿಕರ ಕೊರತೆ ಮತ್ತು ಮಾರುಕಟ್ಟೆಯ ಸಮಸ್ಯೆಯು ತೊಡಕಾಗಿದೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ) ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ), ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ), ಪೀಣ್ಯ ಕೈಗಾರಿಕಾ ಸಂಘ (ಪಿಐಎ) ಜಂಟಿಯಾಗಿ ಎರಡು ದಿನ ಹಮ್ಮಿಕೊಂಡಿರುವ ‘ಇಂಡಿಯಾ ಎಂಎಸ್‌ಎಂಇ ಸಮಾವೇಶ’ದಲ್ಲಿ ಶುಕ್ರವಾರ ಅವರು ಮಾತನಾಡಿದರು.

ಉತ್ಪಾದನೆಯಲ್ಲಿ ಶೇಕಡ 45ರಷ್ಟು ಎಂಎಸ್ಎಂಇ ಕ್ಷೇತ್ರದಿಂದ ಬರುತ್ತಿದೆ. 26 ಕೋಟಿ ಜನರಿಗೆ ಉದ್ಯೋಗ ನೀಡಿದೆ. 50 ಕೋಟಿ ಜನರು ತೊಡಗಿಸಿಕೊಂಡಿರುವ ಕೃಷಿ ಕ್ಷೇತ್ರವು ದೇಶದ ಜಿಡಿಪಿಗೆ ಶೇ 18ರಷ್ಟು ಕೊಡುಗೆ ನೀಡಿದರೆ, ಎಂಎಸ್‌ಎಂಇ ಶೇ 30ರಷ್ಟು ಕೊಡುಗೆ ನೀಡುತ್ತಿದೆ. ಸಣ್ಣ ಕೈಗಾರಿಕೆಗಳನ್ನು ಆರಂಭಿಸುವವರಿಗೆ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ನೀಡುವಾಗ ತೊಂದರೆಯಾಗುತ್ತಿದೆ. ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ಕೈಗಾರಿಕೆ ಮತ್ತು ಬ್ಯಾಂಕಿಂಗ್‌ ಕ್ಷೇತ್ರಗಳ ಪಾತ್ರ ಹಿರಿದಾಗಿದ್ದು, ಸಾಲ ಸೌಲಭ್ಯದ ಅರ್ಜಿ ತಿರಸ್ಕೃತವಾಗಬಾರದು. ಅದಕ್ಕಾಗಿ ಶೀಘ್ರದಲ್ಲಿ ಬ್ಯಾಂಕರ್‌ಗಳ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ADVERTISEMENT

ಸಮಾವೇಶವನ್ನು ಉದ್ಘಾಟಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಶಕ್ತಿ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿ ಅಗತ್ಯ ನೆರವು ನೀಡುವುದು ಸರ್ಕಾರಗಳ ಜವಾಬ್ದಾರಿ’ ಎಂದು ಹೇಳಿದರು.

‘ಸಣ್ಣ ಉದ್ಯಮಗಳಿಗೆ ಅಗತ್ಯವಾಗಿರುವ ವಿದ್ಯುತ್ ಹಾಗೂ ನೀರಿನ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಆದರೆ, ರಸ್ತೆಗಳ ಸಾಮರ್ಥ್ಯ ಹಾಗೇ ಇದೆ. ಇದರಿಂದ ಸಂಚಾರ ದಟ್ಟಣೆಯ ಸಮಸ್ಯೆ ಹೆಚ್ಚಾಗಿದೆ. ಅದಕ್ಕಾಗಿ ಮೆಟ್ರೊ ಯೋಜನೆ, ಸುರಂಗ ಮಾರ್ಗ ಯೋಜನೆ ರೂಪಿಸಲಾಗಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ₹1 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಮಾಡುತ್ತಿದ್ದೇವೆ’ಎಂದು ತಿಳಿಸಿದರು.

‘ನನ್ನ ಸಹೋದರ ಕನಕಪುರದಲ್ಲಿ ರೇಷ್ಮೆಗೆ ಸಂಬಂಧಿಸಿದಂತೆ ಸಣ್ಣ ಕೈಗಾರಿಕೆ ಆರಂಭಿಸಿದ್ದು, ಚೀನಾ ಕಂಪನಿ ಜತೆ ಒಡಂಬಡಿಕೆ ಮಾಡಿಕೊಂಡಿದ್ದ. ಅವರು ಬಂದು ತಂತ್ರಜ್ಞಾನ ಪೂರೈಕೆ ಮಾಡಬೇಕು. ಆದರೆ ವೀಸಾ ಸಮಸ್ಯೆ ಎದುರಾಗಿರುವುದರಿಂದ ಅವರು ಬಂದು ತರಬೇತಿ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಯೋಜನೆ ಅರ್ಧಕ್ಕೆ ನಿಂತಿದೆ. ನಾವು ಬೇರೆ ದೇಶದವರ ಮೇಲೆ ಅವಲಂಬಿತರಾದರೆ ಇಂತಹ ಸಮಸ್ಯೆಗಳಾಗುತ್ತವೆ. ಅವಲಂಬನೆ ಕಡಿಮೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ರಾಜ್ಯದ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ‘ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಡಲು ಹೊಸ ಕೈಗಾರಿಕೆ ನೀತಿಯನ್ನು ಜಾರಿಗೆ ತಂದಿದ್ದೇವೆ. ಇದರಿಂದ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಕೆಲಸವಾಗಲಿದೆ. ಇ–ಖಾತಾ, ವಿದ್ಯುತ್‌ ಶುಲ್ಕ ಸೇರಿದಂತೆ ಸಣ್ಣ ಕೈಗಾರಿಕೆಗಳ ಸಮಸ್ಯೆಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿದೆ. ಸದ್ಯದಲ್ಲಿಯೇ ಮುಖ್ಯಮಂತ್ರಿ ಸಭೆ ಕರೆಯಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ, ಕಾಸಿಯಾ ಅಧ್ಯಕ್ಷ ಎಂ‌.ಜಿ. ರಾಜಗೋಪಾಲ್, ಪಿಐಎ ಅಧ್ಯಕ್ಷ ಶಿವಕುಮಾರ್, ಕೆಎಸ್ಎಸ್ಐಡಿಸಿ ಅಧ್ಯಕ್ಷ ಟಿ.ರಘುಮೂರ್ತಿ, ಎಂಎಸ್ಎಂಇ ಇಲಾಖೆಯ ನಿರ್ದೇಶಕ ನಿತೇಶ್ ಪಾಟೀಲ ಭಾಗವಹಿಸಿದ್ದರು.

ಇಂಡಿಯಾ ಎಂಎಸ್‌ಎಂಇ ಸಮಾವೇಶದಲ್ಲಿ ಜನರು ಮಳಿಗೆಗಳನ್ನು ವೀಕ್ಷಿಸಿದರು ಪ್ರಜಾವಾಣಿ ಚಿತ್ರ

2029ಕ್ಕೆ 20 ಲಕ್ಷ ಉದ್ಯೋಗ ಸೃಷ್ಟಿ

ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರವು `ಎಸ್ಎಂಇ ಕನೆಕ್ಟ್’ ಮತ್ತು `ವೆಂಚುರೈಸ್’ ತರಹದ ರಚನಾತ್ಮಕ ಉಪಕ್ರಮಗಳನ್ನು ಕೈಗೊಂಡಿದೆ. ತಯಾರಿಕೆ ವಲಯದಲ್ಲಿ ಶೇ 12ರಷ್ಟು ಬೆಳವಣಿಗೆ ಸಾಧಿಸುವ ಮೂಲಕ 2029ರ ಹೊತ್ತಿಗೆ 20 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು. ರಾಜ್ಯದಲ್ಲಿ 38 ಲಕ್ಷ ಎಂಎಸ್ಎಂಇ ಉದ್ಯಮಗಳಿದ್ದು 15 ಕೋಟಿ ಜನರಿಗೆ ಬದುಕು ನೀಡಿವೆ. ಮಹಿಳೆಯರು ಮತ್ತು ಪರಿಶಿಷ್ಟ ಜಾತಿ–ಪಂಗಡ ಸಮುದಾಯಗಳಿಂದ ಬಂದ ಉದ್ಯಮಿಗಳು ಇಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.