ADVERTISEMENT

ಕರ್ನಾಟಕದಲ್ಲಿ ಬಿಜೆಪಿ ಗೆದ್ದರೆ ಹೃದಯ ಒಡೆದೇ ಹೋಗುತ್ತೆ: ಯೋಗೇಂದ್ರ ಯಾದವ್

‘ಡಾ.ರಾಮಮನೋಹರ ಲೋಹಿಯಾ ಪ್ರಶಸ್ತಿ’ ಸ್ವೀಕರಿಸಿದ ಯೋಗೇಂದ್ರ ಯಾದವ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 16:27 IST
Last Updated 23 ಮಾರ್ಚ್ 2025, 16:27 IST
<div class="paragraphs"><p>ಭಾರತ ಯಾತ್ರಾ ಕೇಂದ್ರ, ಎಂ.ಪಿ. ಪ್ರಕಾಶ ಸಮಾಜಮುಖಿ ಟ್ರಸ್ಟ್ ಮತ್ತು ಲೋಕನಾಯಕ ಜಯಪ್ರಕಾಶ್ ನಾರಾಯಣ ವಿಚಾರ ವೇದಿಕೆ ಜಂಟಿಯಾಗಿ ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರಿಗೆ ‘ಡಾ. ರಾಮಮನೋಹರ ಲೋಹಿಯಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.</p></div>

ಭಾರತ ಯಾತ್ರಾ ಕೇಂದ್ರ, ಎಂ.ಪಿ. ಪ್ರಕಾಶ ಸಮಾಜಮುಖಿ ಟ್ರಸ್ಟ್ ಮತ್ತು ಲೋಕನಾಯಕ ಜಯಪ್ರಕಾಶ್ ನಾರಾಯಣ ವಿಚಾರ ವೇದಿಕೆ ಜಂಟಿಯಾಗಿ ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರಿಗೆ ‘ಡಾ. ರಾಮಮನೋಹರ ಲೋಹಿಯಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

   

ಬೆಂಗಳೂರು: ‘ನನ್ನ ತವರು ರಾಜ್ಯದಲ್ಲಿ, ಮಹಾರಾಷ್ಟ್ರ ರಾಜ್ಯಗಳಲ್ಲಿ ಬಿಜೆಪಿ ಗೆದ್ದರೆ ನನಗೆ ದುಃಖವಾಗುತ್ತದೆ, ಆಶ್ಚರ್ಯವಾಗುವುದಿಲ್ಲ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಗೆದ್ದರೆ, ಅಚ್ಚರಿಯಷ್ಟೇ ಅಲ್ಲ, ದುಃಖ, ಆಘಾತ, ಹೃದಯ ಒಡೆದೇ ಹೋಗುತ್ತದೆ’ ಎಂದು ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್‌ ಭಾನುವಾರ ಹೇಳಿದರು.

ರಾಮಮನೋಹರ ಲೋಹಿಯಾ ಜನ್ಮ ದಿನಾಚರಣೆ ನಿಮಿತ್ತ ಭಾರತ ಯಾತ್ರಾ ಕೇಂದ್ರ, ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‌ ಮತ್ತು ಲೋಕನಾಯಕ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಡಾ.ರಾಮಮನೋಹರ ಲೋಹಿಯಾ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

ADVERTISEMENT

‘ಕರ್ನಾಟಕ ಶರಣರು, ವಚನಕಾರರ ನಾಡು. ಇಲ್ಲಿ 12ನೇ ಶತಮಾನದಿಂದಲೂ ಸಮಾಜವಾದ ನೆಲಸಿದೆ. ಈ ಪ್ರಶಸ್ತಿಯು ಸಮಾಜವಾದದ ಪರಂಪರೆಯನ್ನು ನೆನಪಿಸುತ್ತಿದೆ’ ಎಂದು ಹೇಳಿದರು.

‘25 ವರ್ಷದಿಂದ ಕರ್ನಾಟಕದ ಬೌದ್ಧಿಕ ಮತ್ತು ರಾಜಕೀಯ ಚಳವಳಿಗಳನ್ನು ನೋಡಿದ್ದೇನೆ. ಇಲ್ಲಿ ದಲಿತ ಚಳವಳಿ, ರೈತ ಚಳವಳಿ, ಸಮಾಜವಾದಿ ಚಳವಳಿಗಳು ವಿಶೇಷವಾಗಿವೆ. ಇಡೀ ದೇಶದಲ್ಲೇ ದಲಿತ ಮತ್ತು ರೈತ ಚಳವಳಿಗಳು ಒಟ್ಟಿಗೆ ಸಾಗಿರುವುದನ್ನು ಇಲ್ಲಿ ಮಾತ್ರ ಕಾಣಲು ಸಾಧ್ಯ. ಇದೇ ವಿಶೇಷ’ ಎಂದು ಪ್ರತಿಪಾದಿಸಿದರು.

‘ನಾವು ಅಗಲಿದ ನಂತರವೂ ಸಮಾಜ ನಮ್ಮನ್ನು ನೆನಪಿಸಿಕೊಳ್ಳವಂತಿರಬೇಕು ಅದೇ ನಿಜವಾದ ಪ್ರಶಸ್ತಿ. ಮಾಜಿ ಪ್ರಧಾನಿ ಚಂದ್ರಶೇಖರ್, ಇಲ್ಲಿನ ಮಾಜಿ ಸಚಿವ ಎಂ.ಪಿ.ಪ್ರಕಾಶ್, ಇಂದು ನಾವು ಸ್ಮರಿಸುತ್ತಿರುವ ರಾಮಮನೋಹರ ಲೋಹಿಯಾ ಅವರನ್ನು ಸದಾ ನೆನಪಿಸಿಕೊಳ್ಳುತ್ತೇವೆ’ ಎಂದರು.

‘ರಾಮಮನೋಹರ ಲೋಹಿಯಾ ಅವರು ಕಾಂಗ್ರೆಸ್ ಹಾಗೂ ನೆಹರೂ ವಿರೋಧಿಯಾಗಿದ್ದರು ಎಂದು ಕೆಲವರು ಅವರನ್ನು ಈಗ ಗೌರವಿಸುತ್ತಿದ್ದಾರೆ. ಆದರೆ, ಲೋಹಿಯಾ ಪ್ರಭುತ್ವದ ವಿರುದ್ಧವಿದ್ದರು. ಅಂದು ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ನೆಹರು ಪ್ರಧಾನಿಯಾಗಿದ್ದರು. ಆ ಕಾರಣಕ್ಕಾಗಿ ವಿರೋಧಿಸಿದ್ದರು’ ಎಂದು ವಿಶ್ಲೇಷಿಸಿದರು.

ಪತ್ರಕರ್ತೆ ವಿಜಯಾ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಅಭಿನಂದನಾ ನುಡಿಗಳನ್ನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.