ADVERTISEMENT

ಜಗಜೀವನ್ ರಾಮ್ ಆಸ್ಪತ್ರೆ ಮಕ್ಕಳ ಕೋವಿಡ್‌ ಚಿಕಿತ್ಸೆಗೆ ಸಜ್ಜು

ಮಕ್ಕಳ ಆರೈಕೆಗೆ 50 ಹಾಸಿಗೆಗಳ ಸೌಕರ್ಯ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 3:17 IST
Last Updated 18 ಆಗಸ್ಟ್ 2021, 3:17 IST
ಡಾ.ಬಾಬು ಜಗಜೀವನ್ ರಾಂ ಆಸ್ಪತ್ರೆಯಲ್ಲಿ ಮಕ್ಕಳ ಚಿಕಿತ್ಸೆ ಸಲುವಾಗಿ ಕಲ್ಪಿಸಲಾದ ಸೌಕರ್ಯವನ್ನು ಡಿ.ರಂದೀಪ್‌ ಪರಿಶೀಲಿಸಿದರು. ನಿರ್ಮಲಾ ಬುಗ್ಗಿ ಹಾಗೂ ಇತರ ವೈದ್ಯರು ಇದ್ದಾರೆ.
ಡಾ.ಬಾಬು ಜಗಜೀವನ್ ರಾಂ ಆಸ್ಪತ್ರೆಯಲ್ಲಿ ಮಕ್ಕಳ ಚಿಕಿತ್ಸೆ ಸಲುವಾಗಿ ಕಲ್ಪಿಸಲಾದ ಸೌಕರ್ಯವನ್ನು ಡಿ.ರಂದೀಪ್‌ ಪರಿಶೀಲಿಸಿದರು. ನಿರ್ಮಲಾ ಬುಗ್ಗಿ ಹಾಗೂ ಇತರ ವೈದ್ಯರು ಇದ್ದಾರೆ.   

ಬೆಂಗಳೂರು: ಬಿಬಿಎಂಪಿ ಅಧೀನದ ಡಾ.ಬಾಬು ಜಗಜೀವನ್ ರಾಮ್ ಸಾರ್ವಜನಿಕ ಆಸ್ಪತ್ರೆ ಮಕ್ಕಳಿಗೆ ಕೋವಿಡ್‌ ಚಿಕಿತ್ಸೆ ನೀಡಲು ಸಜ್ಜಾಗಿದೆ.

ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್‌, ‘ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚು ಇದ್ದಾಗ ಈ ಆಸ್ಪತ್ರೆಯಲ್ಲಿ ಜ್ವರ ಚಿಕಿತ್ಸಾ ಕೇಂದ್ರ ಹಾಗೂ ಕೋವಿಡ್‌ ಚಿಕಿತ್ಸಾ ನಿರ್ಧಾರ ಕೇಂದ್ರವನ್ನು (ಟ್ರಯಾಜ್ ಸೆಂಟರ್) ಪ್ರಾರಂಭಿಸಲಾಗಿತ್ತು. ಇದೀಗ ಇಲ್ಲಿ 30 ಹಾಸಿಗೆಗಳ ಸಾಮರ್ಥ್ಯದ ಮಕ್ಕಳ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿಸಲಾಗಿದೆ. ಇದರ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಎರಡು ಹಾಸಿಗೆಗಳು, ಎಚ್‌ಡಿಯುವಿನಲ್ಲಿ8 ಹಾಸಿಗೆಗಳಿವೆ. ಆಮ್ಲಜನಕ ಪೂರಣ ವ್ಯವಸ್ಥೆ ಹೊಂದಿರುವ 20 ಹಾಸಿಗೆಗಳ ವ್ಯವಸ್ಥೆ ಇಲ್ಲಿದೆ’ ಎಂದು ತಿಳಿಸಿದರು

‘ಈ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲು ಇಂದಿರಾ ಗಾಂಧಿ ಆಸ್ಪತ್ರೆಯ ಮಕ್ಕಳ ತಜ್ಞರಿಂದ ಪಾಲಿಕೆಯ ಮಕ್ಕಳ ವೈದ್ಯರು, ಶುಶ್ರೂಷಕ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಕೋವಿಡ್‌ನ ಸೌಮ್ಯ ಮತ್ತು ಮಧ್ಯಮ ಲಕ್ಷಣಗಳಿರುವ ಮಕ್ಕಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು. ಕೋವಿಡ್‌ನ ಗಂಭೀರ ಲಕ್ಷಣಗಳಿರುವ ಮಕ್ಕಳಿಗೂ ಚಿಕಿತ್ಸೆ ನೀಡುವ ವ್ಯವಸ್ಥೆಯೂ ಇಲ್ಲಿದೆ. ಮಕ್ಕಳ ದೇಹಸ್ಥಿತಿ ತೀವ್ರ ಸ್ಥಿತಿ ತಲು‍ಪಿದರೆ ಇನ್ನೂ ಉತ್ತಮ ಚಿಕಿತ್ಸಾ ಸೌಕರ್ಯಗಳಿರುವ ಆಸ್ಪತ್ರೆಗೆ ಅವರನ್ನು ಕಳುಹಿಸಲಾಗುವುದು’ ಎಂದು ಅವರು ವಿವರಿಸಿದರು.

ADVERTISEMENT

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಮಕ್ಕಳಲ್ಲಿ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಯಾವುದೇ ಏರಿಕೆ ಆಗಿಲ್ಲ. ಸೋಂಕು ಪತ್ತೆಯಾದ ಬಹುತೇಕ ಮಕ್ಕಳಲ್ಲಿ ಸೌಮ್ಯ ಮತ್ತು ಮಧ್ಯಮ ಲಕ್ಷಣಗಳು ಮಾತ್ರ ಕಂಡುಬರುತ್ತಿವೆ. ಅವರು ಮನೆಯಲ್ಲೇ ಆರೈಕೆ ಪಡೆದು ಗುಣಮುಖರಾಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾದವರ ಸಂಖ್ಯೆ ತೀರಾ ಕಡಿಮೆಯಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕೋವಿಡ್‌ ಇರುವ ಮಕ್ಕಳನ್ನು ಹೇಗೆ ಆರೈಕೆ ಮಾಡಬೇಕು ಎಂಬ ಬಗ್ಗೆ ಈಗಾಗಲೇ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ (ಆರ್‌ಡಬ್ಲ್ಯುಎ) ಮಾರ್ಗಸೂಚಿ ಬಿಡುಗಡೆ ಮಾಡಿದ್ದೇವೆ. ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಲು ಸೂಚಿಸಿದ್ದೇವೆ’ ಎಂದು ಅವರು ತಿಳಿಸಿದರು.

ಈ ಆಸ್ಪತ್ರೆಯಲ್ಲಿ ಹೊರರೋಗಿ ಮತ್ತು ಒಳರೋಗಿ ಸೌಲಭ್ಯಗಳಿವೆ. ಜನರಲ್ ಮೆಡಿಸಿನ್, ಮಕ್ಕಳ ಚಿಕಿತ್ಸೆ, ಕಣ್ಣು, ಮೂಳೆ, ದಂತ,ಸಾಮಾನ್ಯ ಶಸ್ತ್ರಚಿಕಿತ್ಸೆ, ಕಿವಿ, ಮೂಗು ಹಾಗೂ ಗಂಟಲು ಚಿಕಿತ್ಸಾ ವಿಭಾಗಗಳಿವೆ. ಗರ್ಭಕಂಠದ ಕ್ಯಾನ್ಸರ್‌ ತಪಾಸಣಾ ಸೌಲಭ್ಯವೂ ಇಲ್ಲಿದೆ. ಎಕ್ಸ್-ರೇ ಘಟಕ ಮತ್ತು ರಕ್ತ ಶೇಖರಣಾ ಘಟಕವನ್ನೊಳಗೊಂಡ ಹೈಟೆಕ್ ಪ್ರಯೋಗಾಲಯವೂ ಇದೆ.

₹5 ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣ ದೇಣಿಗೆ

ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ₹5 ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಈ ಆಸ್ಪತ್ರೆಗೆ ಶಿಲ್ಪಾ ಸಿಂಗ್ ಮತ್ತು ಪಾರಿಸಾ ಸಿಂಗ್ ದೇಣಿಗೆಯಾಗಿ ನೀಡಿದ್ದಾರೆ. ಮೂರು ಬೈಪಾಸ್‌ ಯಂತ್ರ, ಗಂಟಲಿನ ಗೂಡಿನಲ್ಲಿರುವ ದನಿಪೆಟ್ಟಿಗೆಯ ಒಳಭಾಗವನ್ನು ಪರೀಕ್ಷಿಸಲು ಉಪಯೋಗಿಸುವ ಕನ್ನಡಿಯನ್ನೊಳಗೊಂಡ ವಿಡಿಯೊ ಲಾರಿಂಗೋಸ್ಕೋಪ್ ಉಪಕರಣ, 50 ಲೀ. ಸ್ಯಾನಿಟೈಸರ್‌ ಹಾಗೂ 300 ಪಿಪಿಇ ಕಿಟ್‌ಗಳನ್ನು ಅವರು ನೀಡಿದ್ದಾರೆ. ಡಿ.ರಂದೀಪ್ ಅವರು ಉಪಕರಣಗಳನ್ನು ಸ್ವೀಕರಿಸಿದರು. ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ಡಾ. ನಿರ್ಮಲಾ ಬುಗ್ಗಿ ಹಾಗೂ ಇತರ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.