ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಧರ್ಮಸ್ಥಳದ ಸುತ್ತಮುತ್ತಲಿನ ಅಮಾನುಷ ಘಟನೆಗಳ ಕುರಿತು ಎಸ್‌ಐಟಿ ತನಿಖೆ ನಡೆಯುತ್ತಿರುವ ನಡುವೆಯೇ ಸಚಿವ ಸಂಪುಟದ ಕೆಲ ಸದಸ್ಯರು ಹಾಗೂ ವಿರೋಧ ಪಕ್ಷದವರು ಕಾನೂನು ಬಾಹಿರವಾಗಿ ಈ ಬಗ್ಗೆ ಹೇಳಿಕೆ ನೀಡುತ್ತಿರುವುದನ್ನು ನಿಲ್ಲಿಸಬೇಕು’ ಎಂದು ಕರ್ನಾಟಕ ಜಾಗೃತ ನಾಗರಿಕರ ಒಕ್ಕೂಟ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ಪ್ರಮುಖರು, ‘ನಾವ್ಯಾರೂ ಧರ್ಮಸ್ಥಳ ಕ್ಷೇತ್ರದ ಕುರಿತು ಮಾತನಾಡುತ್ತಿಲ್ಲ. ಅಲ್ಲಿ ನಡೆದ ದುರ್ಘಟನೆಗಳಿಗೆ ಕಾರಣರಾದವರು ಯಾರು? ಎಂಬ ಸತ್ಯವನ್ನು ಬಯಲಿಗೆಳೆಯಿರಿ’ ಎಂಬುದು ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದ್ದಾರೆ.
ಕೆ.ಮರುಳಸಿದ್ದಪ್ಪ, ಜಿ.ರಾಮಕೃಷ್ಣ, ವಿಜಯಾ, ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್ ವಿಮಲಾ.ಕೆ.ಎಸ್, ಬಿ.ಶ್ರೀಪಾದ ಭಟ್,ಮೀನಾಕ್ಷಿ ಬಾಳಿ, ಡಾ.ವಸುಂಧರಾ ಭೂಪತಿ, ಎನ್ ಗಾಯತ್ರಿ, ನೀಲಾ.ಕೆ, ಜಾಣಗೆರೆ ವೆಂಕಟರಾಮಯ್ಯ, ರುದ್ರಪ್ಪ ಹುನಗವಾಡಿ, ಇಂದಿರಾ ಕೃಷ್ಣಪ್ಪ ಅವರು ಪತ್ರಿಕಾ ಹೇಳಿಕೆಗೆ ಸಹಿ ಹಾಕಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಉಪ ಮುಖ್ಯಮಂತ್ರಿ, ಗೃಹ ಸಚಿವರು ಆಡಿದ ಮಾತುಗಳು ಆಘಾತವುಂಟುಮಾಡಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವರ ಹೇಳಿಕೆಗಳು ಕೂಡಾ ಎಸ್ಐಟಿ ಅಧಿಕಾರಿಗಳ ಧೃತಿಗೆಡಿಸುವಂತೆ ಇವೆ. ನ್ಯಾಯಯುತವಾಗಿ ಸತ್ಯ ಹೊರಬರಲೆಂದು ಕಾಯುತ್ತಿರುವ ಸಂತ್ರಸ್ಥರ ಕುಟುಂಬಗಳಿಗೆ ಭಯ ಹಾಗೂ ನಿರಾಸೆ ಹುಟ್ಟಿಸುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷವಾದ ಬಿಜೆಪಿ ಶಾಸಕರು ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡು ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುತ್ತಿದ್ದಾರೆ. ಹೇಯ ಕೃತ್ಯ ಎಸಗಿದವರನ್ನು ಪತ್ತೆ ಮಾಡಲು ತಮ್ಮದೇ ಸರ್ಕಾರವಿದ್ದಾಗ ಪ್ರಯತ್ನ ಮಾಡದವರು ಈಗಲೂ ಅದಕ್ಕೆ ಅಡ್ಡಿ ಪಡಿಸುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ ಎಂದಿದ್ದಾರೆ.
ಕಾನೂನುಬಾಹಿರವಾಗಿ ಹೇಳಿಕೆ ನೀಡಿ ಎಸ್ಐಟಿಯನ್ನು ಗೊಂದಲಕ್ಕೆ ದೂಡದಂತೆ ಸಂಪುಟದ ಸದಸ್ಯರಿಗೆ ತಾಕೀತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ವ್ಯಕ್ತಿಗಳು ಎಸಗಿದ ತಪ್ಪುಗಳ ಕುರಿತು ಮಾತನಾಡಿದರೆ ಅದನ್ನು ದುರುದ್ದೇಶಪೂರ್ವಕವಾಗಿ ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರವೆಂದು ಬಿಂಬಿಸುತ್ತಿದ್ದಾರೆ. ಅಪಾರ ಸಂಖ್ಯೆಯ ಭಕ್ತರ ನಂಬಿಕೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಕೂಡ ಅಕ್ಷಮ್ಯ ಅಪರಾಧ. ತಪ್ಪು ಮಾಡಿದವರು ಯಾರು ಎಂಬುದು ಬಯಲಾಗುವುದನ್ನು ತಡೆಯಲು ಮತ್ತು ತಪ್ಪಿತಸ್ಥರನ್ನು ರಕ್ಷಿಸಲು ಟೊಂಕ ಕಟ್ಟಿ ನಿಂತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದಿದ್ದಾರೆ.
ಸೌಜನ್ಯ ಪ್ರಕರಣದ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆಗಳು ನಡೆದ ಕಾರಣ 2013ರಲ್ಲಿ ಸಿಬಿಐ ತನಿಖೆಗೆ ಒಪ್ಪಿಸಲಾಯಿತು. ಪ್ರಕರಣದ ಪ್ರಾಥಮಿಕ ತನಿಖಾಧಿಕಾರಿಗಳು ಎಸಗಿದ ದೋಷಗಳನ್ನು ಬೊಟ್ಟು ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳಲು ಸಿಬಿಐ ನ್ಯಾಯಾಲಯ ಆದೇಶಿಸಿದೆ. ನಿರಪರಾಧಿಯಾಗಿದ್ದ ಸಂತೋಷ್ ರಾವ್ ಅವರ ಮೇಲೆ ಆರೋಪ ಸಾಬೀತುಪಡಿಸುವ ಯಾವ ಸಾಕ್ಷಿಗಳೂ ಇಲ್ಲವೆಂದು ಹೇಳಿ ಅನವಶ್ಯಕವಾಗಿ ಆತನನ್ನು ಜೈಲಿನಲ್ಲಿರಿಸಿದ್ದಕ್ಕೆ ಪರಿಹಾರ ನೀಡಲು ಕೂಡ ಆದೇಶಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.