ADVERTISEMENT

ಜೈಲಿನಲ್ಲಿ ಸ್ನೇಹ: ಜಾಮೀನು ಮೇಲೆ ಹೊರಬಂದು ಕಳ್ಳತನ

ಗುಜರಿ ವ್ಯಾಪಾರಿ ಸೇರಿ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 15:44 IST
Last Updated 28 ಜೂನ್ 2022, 15:44 IST
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ   

ಬೆಂಗಳೂರು: ನಗರದ ಹಲವು ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ನಾಲ್ವರನ್ನು ಪೀಣ್ಯ ಪೊಲೀಸರು ಬಂಧಿಸಿದ್ದು, ಅವರಿಂದ ₹ 35.47 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

'ಫಯಾಜ್ ಅಹಮ್ಮದ್, ಪ್ರಸಾದ್, ಮಹೇಶ್ ಹಾಗೂ ಸುಮಂತ್ ಬಂಧಿತರು. ಟಿ. ದಾಸರಹಳ್ಳಿ ವಿದ್ಯಾನಗರದ 1ನೇ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ ಜೂನ್ 2ರಂದು ಮಧ್ಯಾಹ್ನ ಕಳ್ಳತನವಾಗಿತ್ತು. ಈ ಬಗ್ಗೆ ದಾಖಲಾದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ₹ 35.47 ಲಕ್ಷ ಮೌಲ್ಯದ 655 ಗ್ರಾಂ ಚಿನ್ನಾಭರಣ ಹಾಗೂ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

32 ವರ್ಷಗಳಿಂದ ಕಳ್ಳತನ: ‘ಬಂಧಿತ ಆರೋಪಿ ಫಯಾಜ್ ಅಹಮ್ಮದ್ ಗುಜರಿ ವ್ಯಾಪಾರಿ. 1990ರಿಂದಲೇ ಕಳ್ಳತನ ಎಸಗುತ್ತಿದ್ದ. ಈತನ ವಿರುದ್ಧ ಈಗಾಗಲೇ 24 ಪ್ರಕರಣಗಳು ದಾಖಲಾಗಿದ್ದವು. ಹಲವು ಬಾರಿ ಜೈಲಿಗೂ ಹೋಗಿ ಬಂದಿದ್ದ. ಕಳ್ಳತನದಿಂದ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಆರೋಪಿಗಳಾದ ಪ್ರಸಾದ್ ಹಾಗೂ ಮಹೇಶ್ ಸಹ ಪದೇ ಪದೇ ಅಪರಾಧ ಎಸಗುತ್ತಿದ್ದರು. ಕಳ್ಳತನ ಪ್ರಕರಣದಲ್ಲಿ ಇವರಿಬ್ಬರು ಜೈಲು ಸೇರಿದ್ದರು. ಜೈಲಿನಲ್ಲಿ ಇವರಿಬ್ಬರಿಗೆ ಫಯಾಜ್ ಪರಿಚಯವಾಗಿತ್ತು. ಮೂವರೂ ಸೇರಿ ಕಳ್ಳತನ ಎಸಗಲು ಜೈಲಿನಲ್ಲೇ ಸಂಚು ರೂಪಿಸಿದ್ದರು. ಜಾಮೀನು ಮೇಲೆ ಹೊರಬಂದು ಕಳ್ಳತನ ಶುರು ಮಾಡಿದ್ದರು.’

‘ಆರೋಪಿಗಳು ಕದ್ದು ತರುತ್ತಿದ್ದ ಚಿನ್ನಾಭರಣವನ್ನು ಇನ್ನೊಬ್ಬ ಆರೋಪಿ ಸುಮಂತ್ ಮಾರಾಟ ಮಾಡುತ್ತಿದ್ದ. ಅದೇ ಹಣವನ್ನು ಆರೋಪಿಗಳು ಹಂಚಿಕೊಳ್ಳುತ್ತಿದ್ದರು’ ಎಂದೂ ಪೊಲೀಸರು ತಿಳಿಸಿದರು.

‘ಅಂಗಳದಲ್ಲಿ ಕಸ ಬಿದ್ದಿರುತ್ತಿದ್ದ ಹಾಗೂ ರಂಗೋಲಿ ಹಾಕಿರದ ಮನೆಗಳನ್ನು ಆರೋಪಿಗಳು ಗುರುತಿಸುತ್ತಿದ್ದರು. ಬೀಗ ಮುರಿದು ಮನೆಯೊಳಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ಕದ್ದುಕೊಂಡು ಪರಾರಿಯಾಗುತ್ತಿದ್ದರು. ಚಿಕ್ಕಮಗಳೂರು, ಹಿರಿಯೂರು, ಭದ್ರಾವತಿ, ತುಮಕೂರು, ಉಡುಪಿ, ಚಾಮರಾಜನಗರ, ವಿಜಯಪುರ, ಯಾದಗಿರಿ ಸೇರಿದಂತೆ ವಿವಿಧೆಡೆ ಆರೋಪಿಗಳು ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.