ADVERTISEMENT

ಜಂಬೂ ಸವಾರಿಗೆ 15 ಲಕ್ಷ ಜನರ ನಿರೀಕ್ಷೆ

ಮೈಸೂರು ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 7:41 IST
Last Updated 7 ಸೆಪ್ಟೆಂಬರ್ 2019, 7:41 IST

ಮೈಸೂರು: ‘ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಘಟ್ಟ ಜಂಬೂ ಸವಾರಿ ವೀಕ್ಷಣೆಗೆ ಈ ಬಾರಿ 15 ಲಕ್ಷ ಜನರು ಬರುವ ನಿರೀಕ್ಷೆಯಿದ್ದು, ಸೂಕ್ತ ಬಂದೋಬಸ್ತ್‌ ಕೈಗೊಳ್ಳಲಾಗುತ್ತಿದೆ’ ಎಂದು ಮೈಸೂರು ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಶುಕ್ರವಾರ ಇಲ್ಲಿ ತಿಳಿಸಿದರು.

‘ದಸರಾ ಉದ್ಘಾಟನೆಗೊಂಡ ಬೆನ್ನಿಗೆ ನಿತ್ಯವೂ ಕನಿಷ್ಠ 1 ಲಕ್ಷ ಜನರು ಮೈಸೂರಿಗೆ ಭೇಟಿ ನೀಡಲಿದ್ದಾರೆ. ಒಟ್ಟಾರೆ ಈ ಬಾರಿಯ ದಸರಾ ಮಹೋತ್ಸವದಲ್ಲಿ 25 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ’ ಎಂದು ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಹೇಳಿದರು.

‘ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಸಾಗುವ ಹಾದಿಯುದ್ದಕ್ಕೂ ಭದ್ರತೆಯ ದೃಷ್ಟಿಯಿಂದ ಹೆಚ್ಚುವರಿಯಾಗಿ 190 ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಈಗಾಗಲೇ ‘ಪೊಲೀಸ್‌ ಚೀತಾ‘ಗಳ ಮೂಲಕ ರಸ್ತೆಯ ಎರಡೂ ಬದಿಯ ವಸತಿ, ವಾಣಿಜ್ಯ ಕಟ್ಟಡಗಳ ಸರ್ವೇ ನಡೆಸಿದ್ದು, ಸೂಕ್ತ ಭದ್ರತೆ ಆಯೋಜಿಸುವ ಕೆಲಸ ಬಿರುಸಿನಿಂದ ನಡೆದಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

‘ಈಗಾಗಲೇ ಹೋಟೆಲ್ ಬುಕ್ಕಿಂಗ್ ಆರಂಭವಾಗಿದೆ. ಸಹಜವಾಗಿಯೇ ಹೈ ಅಲರ್ಟ್‌ನಡಿ ಭದ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.

‘500 ಜನರ ದಟ್ಟಣೆಯಿರುವ ಸ್ಥಳಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಈ ಹಿಂದೆಯೇ ಸೂಚಿಸಲಾಗಿತ್ತು. ಅದರಂತೆ ಶಾಲಾ–ಕಾಲೇಜು, ಶಾಪಿಂಗ್‌ ಕಾಂಪ್ಲೆಕ್ಸ್‌ ಸೇರಿದಂತೆ ಇನ್ನಿತರೆಡೆ ಖಾಸಗಿಯಾಗಿ ಸಂಬಂಧಿಸಿದವರೇ 14,500 ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿಕೊಂಡಿದ್ದಾರೆ. ಇದು ಎರಡು ತಿಂಗಳ ಹಿಂದಿನ ಮಾಹಿತಿ. ಇದೀಗ ಸಂಖ್ಯೆಯಲ್ಲಿ ಹೆಚ್ಚಳವಾಗಿರಬಹುದು’ ಎಂದು ಡಿಸಿಪಿ ಎಂ.ಮುತ್ತುರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.