ADVERTISEMENT

ಜಮ್ಮು–ಕಾಶ್ಮೀರದ ಕತ್ತಲೆ ಕರಗಲಿದೆ

ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ವಿಚಾರಸಂಕಿರಣದಲ್ಲಿ ರಾಮ್‌ ಮಾಧವ್‌

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 19:36 IST
Last Updated 10 ಆಗಸ್ಟ್ 2019, 19:36 IST
ವಿಚಾರ ಸಂಕಿರಣದಲ್ಲಿ ರಾಮ್ ಮಾಧವ್ ಮಾತನಾಡಿದರು. ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ಸಂಚಾಲಕ ಮೇಜರ್ ಆರ್.ಡಿ ಭಾರ್ಗವ ಮತ್ತು ದಿಲೀಪ್ ಇದ್ದರು - ಪ್ರಜಾವಾಣಿ ಚಿತ್ರ
ವಿಚಾರ ಸಂಕಿರಣದಲ್ಲಿ ರಾಮ್ ಮಾಧವ್ ಮಾತನಾಡಿದರು. ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ಸಂಚಾಲಕ ಮೇಜರ್ ಆರ್.ಡಿ ಭಾರ್ಗವ ಮತ್ತು ದಿಲೀಪ್ ಇದ್ದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಂವಿಧಾನದ 370ನೇ ವಿಧಿಯಡಿ ನೀಡಿದ್ದ ವಿಶೇಷಾಧಿಕಾರ ರದ್ದತಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆಗೆ ಪೂರ್ಣ ವಿರಾಮ ಬೀಳಲಿದೆ. ಅಲ್ಲಿನ ಜನರ ಕತ್ತಲೆ ಕರಗಲಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ತಿಳಿಸಿದರು.

ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರವು ನಗರದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಈವರೆಗೂ ಪಡಿತರ ಚೀಟಿಯನ್ನೂ ಹೊಂದಿರದ ಜನರು ಜಮ್ಮು ಮತ್ತು ಕಾಶ್ಮೀರದಲ್ಲಿ ಇದ್ದಾರೆ. ಅಬ್ದುಲ್ಲಾ ಹಾಗೂಮುಫ್ತಿ ಮೊಹಮ್ಮದ್ ಮನೆತನಗಳು ಅಧಿಕಾರವನ್ನು ತಮ್ಮಲ್ಲಿಯೇ ಕೇಂದ್ರೀಕರಿಸಿಕೊಂಡಿದ್ದವು. ಸರ್ಕಾರದ ಸೌಲಭ್ಯವನ್ನು ನೀಡದೆ ಜನರನ್ನು ವಂಚಿಸಿದ್ದವು. ಈಗ ವಿಶೇಷಾಧಿಕಾರ ರದ್ದಾಗಿದ್ದರಿಂದ ಕಾನೂನುಬಾಹಿರವಾಗಿ ಜನಸಾಮಾನ್ಯರ ಮೇಲೆ ಅಧಿಕಾರ ಚಲಾಯಿಸಲು ಆಗುವುದಿಲ್ಲ ಎಂಬ ಕಾರಣಕ್ಕೆ ಈ ನಿರ್ಧಾರವನ್ನು ಅವರು ವಿರೋಧಿಸುತ್ತಿದ್ದಾರೆ.ಕೇಂದ್ರಾಡಳಿತ ಪ್ರದೇಶವಾಗಿರುವ ಈ ಪ್ರದೇಶದಲ್ಲಿ ಅಭಿವೃದ್ಧಿ, ದೃಢತೆ ಹಾಗೂ ಸಬಲೀಕರಣಕ್ಕೆ ಆದ್ಯತೆ ಸಿಗಲಿದೆ’ ಎಂದರು.

ADVERTISEMENT

‘ಬಡತನ, ನಿರುದ್ಯೋಗ ಹಾಗೂ ಹಿಂಸೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ತಾಂಡವವಾಡುತ್ತಿದೆ. ಅಲ್ಲಿ ಸುಸಜ್ಜಿತ ಆಸ್ಪತ್ರೆಯೂ ಇಲ್ಲ. 370ನೇ ವಿಧಿ ತಿದ್ದುಪಡಿಗೆ ವಿರೋಧಿಸುತ್ತಿರುವ ವಿರೋಧ ಪಕ್ಷದವರು ತಾವು ಅಧಿಕಾರಿದಲ್ಲಿದ್ದಾಗ 45 ಬಾರಿ ತಿದ್ದುಪಡಿ ಮಾಡಿದ್ದಾರೆ’ ಎಂದು ಹೇಳಿದರು.

‘ನಿರಾಶ್ರಿತರಾಗಿದ್ದ ಪಂಡಿತ ಸಮುದಾಯದವರಲ್ಲಿ ಪೂರ್ವಜರ ಭೂಮಿಗೆ ಮರಳುವ ಕನಸು ಜಾಗೃತಗೊಂಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.