
ಬೆಂಗಳೂರು: ‘ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ, ನೀರಿನ ವ್ಯವಸ್ಥೆಗಳ ಮೇಲಿನ ಒತ್ತಡ, ಬದಲಾದ ಜೀವನಶೈಲಿ ಮತ್ತು ಸಂಚಾರ ದಟ್ಟಣೆಯಲ್ಲಿನ ಪ್ರಯಾಣವು ದೈಹಿಕ ಹಾಗೂ ಮಾನಸಿಕ ಅನಾರೋಗ್ಯ ಸಮಸ್ಯೆ ಹೆಚ್ಚಳವಾಗಲು ಕಾರಣವಾಗುತ್ತಿವೆ’ ಎಂದು ವಿವಿಧ ಕ್ಷೇತ್ರದ ತಜ್ಞರು ಕಳವಳ ವ್ಯಕ್ತಪಡಿಸಿದರು.
ಜನಾಗ್ರಹ ಸಂಘಟನೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬೆಂಗಳೂರು ನಮ್ಮ ನಾಗರಿಕರಿಗೆ ಆರೋಗ್ಯಕರ ಜೀವನ ನೀಡುತ್ತಿದೆಯೇ?’ ಚರ್ಚೆಯಲ್ಲಿ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್, ರಾಮಲಿಂಗಸ್ವಾಮಿ ಸೆಂಟರ್ ಫಾರ್ ಇಕ್ವಿಟಿ ಆ್ಯಂಡ್ ಸೋಶಿಯಲ್ ಡಿಟರ್ಮಿನೆಂಟ್ಸ್ ಆಫ್ ಹೆಲ್ತ್‌ನ ಪ್ರಾಧ್ಯಾಪಕಿ ಶ್ರೀಲತಾ ರಾವ್ ಶೇಷಾದ್ರಿ, ಅರ್ಥಶಾಸ್ತ್ರಜ್ಞ ನಚಿಕೇತ್ ಮೋರ್ ಮತ್ತು ಜನಾಗ್ರಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತ್ ವಿಶ್ವನಾಥನ್ ಭಾಗವಹಿಸಿದ್ದರು.
ಸಿ.ಎನ್. ಅಶ್ವತ್ಥನಾರಾಯಣ್, ‘ಮಾಲಿನ್ಯ, ಬದಲಾದ ಜೀವನಶೈಲಿಯಿಂದ ನಗರದ ಜನರಲ್ಲಿ ಅನೇಕ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆರೋಗ್ಯ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಪರಿಸರ ಸಂರಕ್ಷಣೆ, ಮಾಲಿನ್ಯರಹಿತ ಸಾರಿಗೆ ಹಾಗೂ ತ್ಯಾಜ್ಯ ನಿರ್ವಹಣೆಯನ್ನು ಯೋಜಿಸಬೇಕು’ ಎಂದು ಅಭಿಪ್ರಾಯಪಟ್ಟರು.
ಶ್ರೀಲತಾ ರಾವ್ ಶೇಷಾದ್ರಿ, ‘ನಗರದ ತ್ವರಿತ ಬೆಳವಣಿಗೆ, ವಲಸೆ, ಹವಾಮಾನ ಬದಲಾವಣೆ ಸೇರಿ ವಿವಿಧ ಕಾರಣಗಳು ಆರೋಗ್ಯ ಮತ್ತು ನಾಗರಿಕ ವ್ಯವಸ್ಥೆಯ ಮೇಲೆ ಒತ್ತಡವನ್ನುಂಟು ಮಾಡುತ್ತಿವೆ. ವಾಯುಮಾಲಿನ್ಯ, ಜನದಟ್ಟಣೆ ಮತ್ತು ಹದಗೆಡುತ್ತಿರುವ ಮೂಲಭೂತ ಸೇವೆಗಳು ಉಸಿರಾಟ ಮತ್ತು ಹೃದಯ ಸಂಬಂಧಿ ಅಪಾಯಗಳ ಹೆಚ್ಚಳಕ್ಕೆ ಕಾರಣವಾಗಿವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.