ADVERTISEMENT

ಜಲಮಂಡಳಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 20:17 IST
Last Updated 24 ಆಗಸ್ಟ್ 2019, 20:17 IST
ಬೇಗೂರಿನಲ್ಲಿ ನಡೆದ ಜನಸ್ಪಂದನದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು
ಬೇಗೂರಿನಲ್ಲಿ ನಡೆದ ಜನಸ್ಪಂದನದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು   

ಬೆಂಗಳೂರು:ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸದ ಜಲಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬೇಗೂರು ನಾಗ ರಿಕರು, ಜಲಮಂಡಳಿ ಕಚೇರಿ ಎದುರುಸೋಮವಾರ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ನಗರದ ಬೇಗೂರಿನಲ್ಲಿ ಶನಿವಾರ ಆಯೋಜಿಸಿದ್ದ ಜನಸ್ಪಂದನದಲ್ಲಿ ಪಾಲ್ಗೊಂಡಿದ್ದ ಎಸ್‌ಎನ್‌ಎನ್‌ ರಾಜ್‌ ಸೆರೆನಿಟಿ ಅಪಾರ್ಟ್‌ಮೆಂಟ್‌ ಸಮು ಚ್ಚಯದ ನಿವಾಸಿಗಳು, ಕಾರ್ಯಕ್ರಮಕ್ಕೆ ಗೈರಾದ ಜಲಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಹದಗೆಟ್ಟಿರುವ ಬಗ್ಗೆ ನಿವಾಸಿಗಳು ಪ್ರಸ್ತಾಪಿಸಿದಾಗ ‘100 ಹಳ್ಳಿಗಳಿಗೆ ಕಾವೇರಿ ನೀರು ಸರ ಬರಾಜು ಮಾಡಲು ಪೈಪ್‌ಲೈನ್ ಅಳವಡಿಕೆ ಕಾಮಗಾರಿಯನ್ನು ಜಲ ಮಂಡಳಿ ಆರಂಭಿಸಿದ್ದು, ಎರಡು ವರ್ಷವಾದರೂ ಮುಗಿದಿಲ್ಲ. ಬೇಗೂರು ಕೊಪ್ಪ ಮುಖ್ಯರಸ್ತೆ ಅವ್ಯವಸ್ಥೆಗೆ ಜಲ ಮಂಡಳಿಯೇ ಹೊಣೆ. ಅವರೇ ಉತ್ತರಿಸಬೇಕು’ ಎಂದು ಬಿಬಿಎಂಪಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

‘ಜಲಮಂಡಳಿಯ ಪೈಪ್ ಲೈನ್ ಅಳವಡಿಕೆ ಯಾವಾಗ ಮುಗಿಯುತ್ತದೆ’ ಎಂದು ಅನೂಪ್ ಎಂಬುವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಾಲಿಕೆ ಸದಸ್ಯ ಎಂ.ಆಂಜನಪ್ಪ, ‘ನಿಮ್ಮಿಂದ ಎದುರಾಗುವ ಇಂತಹ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೇ ಜಲಮಂಡಳಿ ಅಧಿಕಾರಿಗಳು ಸಭೆಗೆ ಗೈರಾಗಿದ್ದಾರೆ. ರಸ್ತೆ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಜಲಮಂಡಳಿಯ ಕಾಮಗಾರಿ ಮುಗಿದ ಬಳಿಕ ರಸ್ತೆ ಡಾಂಬರೀಕರಣಕ್ಕೆ ಸಿದ್ಧರಿದ್ದೇವೆ’ ಎಂದರು.

‘ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಜಲಮಂಡಳಿಯು ಕಾಲಮಿತಿ ಹಾಕಿಕೊಂಡಿಲ್ಲ. ಅಧಿಕಾರಿಗಳ ನಿರ್ಲ ಕ್ಷ್ಯದ ಬಗ್ಗೆ ಮಂಡಳಿಯ ಅಧ್ಯಕ್ಷರನ್ನೇ ಭೇಟಿಯಾಗಿ ಮಾತನಾಡುತ್ತೇನೆ’ ಎಂದು ಭರವಸೆ ನೀಡಿದರು.

‘ಬೇಗೂರು ರಸ್ತೆ ವಿಸ್ತರಣೆ ಆಗ ಬೇಕಿದೆ. ಟಿಡಿಆರ್‌ ಸ್ವೀಕರಿಸಲು ಆಸ್ತಿ ಮಾಲೀಕರು ಒಪ್ಪುತ್ತಿಲ್ಲ. ಎಲ್ಲಾ ಜನಪ್ರತಿನಿಧಿಗಳು ಸೇರಿ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಆಂಜನಪ್ಪ ಉತ್ತರಿಸಿದರು.

ಎರಡು ವರ್ಷಗಳಿಂದ ನೀರಿಲ್ಲ:‘ನಮ್ಮ ಮನೆಗೂ ಕಾವೇರಿ ನೀರು ಪೂರೈಕೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಎರಡು ವರ್ಷಗಳಿಂದ ಕಾಯುತ್ತಿದ್ದೇವೆ. ಆದರೆ, ಜಲಮಂಡಳಿ ಕಾಮಗಾರಿ ಪೂರ್ಣಗೊಳಿಸುವ ಲಕ್ಷಣ ಕಾಣುತ್ತಿಲ್ಲ’ ಎಂದು ಕೆಲವು ನಿವಾಸಿಗಳು ದೂರಿದರು.

ನೀರಿನ ಸಂಪರ್ಕ ಕಲ್ಪಿಸಲು ಪೈಪ್‌ ಹಾಕುವುದಕ್ಕಾಗಿ ರಸ್ತೆ ಅಗೆಯಲಾಗುತ್ತಿದೆ. ಆದರೆ, ಕಾಮಗಾರಿ ಪೂರ್ಣಗೊಳಿಸಿದ ನಂತರ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುವ ಕೆಲಸ ಮಾಡುತ್ತಿಲ್ಲ. ಇದರಿಂದ ಸಂಚಾರ ದಟ್ಟಣೆ ಸಮಸ್ಯೆಯನ್ನೂ ಎದುರಿಸಬೇಕಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

‘‌ಚುನಾವಣೆಯ ನಂತರಶಾಸಕ ಎಂ. ಕೃಷ್ಣಪ್ಪ ಒಮ್ಮೆಯೂ ವಾರ್ಡ್‌ಗೆ ಭೇಟಿ ನೀಡಿಲ್ಲ. ರಸ್ತೆ ಸಮಸ್ಯೆ ವಿರುದ್ಧ ಪ್ರತಿಭಟನೆ ಮಾಡಿದರೂ ಇತ್ತ ಸುಳಿದಿಲ್ಲ’ ಎಂದು ಸಚಿನ್ ದೂರಿದರು.

ಕೆರೆಗಳ ಸಂರಕ್ಷಣೆಗೆ ಶ್ರಮಿಸುತ್ತಿರುವ ಆನಂದ್ ಮಲ್ಲಿಗವಾಡ, ಕೆರೆ ಸಂರಕ್ಷಣೆಯಲ್ಲಿ ಸಮುದಾಯದ ಪಾತ್ರದ ಕುರಿತು ಮಾತನಾಡಿದರು.

‘ಕಲ್ಲುಗಳಿಂದ ಕಾಮಗಾರಿಗೆ ಅಡ್ಡಿ’
‘ಬೇಗೂರಿನ ಹಲವು ಕಡೆ ಕಾಮಗಾರಿ ತ್ವರಿತಗತಿಯಿಂದ ಸಾಗಿದೆ. ಆದರೆ, ಪೈಪ್‌ಲೈನ್‌ ಅಳವಡಿಕೆ ಸಂದರ್ಭದಲ್ಲಿ ನೆಲದೊಳಗೆ ದೊಡ್ಡ ಕಲ್ಲುಗಳು ಅಡ್ಡ ಬಂದಿದ್ದು, ಅವುಗಳ ತೆರವು ಮಾಡಲು ಹೆಚ್ಚು ಸಮಯ ಬೇಕಾಗಿರುವುದರಿಂದ ಕೆಲವು ಕಡೆ ಕಾಮಗಾರಿ ವಿಳಂಬವಾಗುತ್ತಿದೆ’ ಎಂದು ತಮ್ಮ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.

‘ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ಮಂಡಳಿಯು ಬಿಬಿಎಂಪಿಗೆ ₹82 ಕೋಟಿ ನೀಡಿದೆ. ಪಾಲಿಕೆಯು ಈ ಕಾರ್ಯ ಕೈಗೆತ್ತಿಕೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.