ಬೆಂಗಳೂರು: ಅಂಗವಿಕಲರು ನಗರದಲ್ಲಿ ಬುಧವಾರ ದ್ವಿಚಕ್ರ, ತ್ರಿಚಕ್ರ ವಾಹನಗಳಲ್ಲಿ ಜಾಥಾ ನಡೆಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ‘ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರು ತಪ್ಪದೆ ಮತದಾನ ಮಾಡಬೇಕು. ಈ ಬಗ್ಗೆ ಜಾಗೃತಿ ಮೂಡಿಸಲು ಅಂಗವಿಕಲರ ಮೂಲಕ ಜಾಗೃತಿ ಜಾಥಾ ಮಾಡಲಾಯಿತು. ಸಮಾಜದ ಪ್ರತಿಯೊಂದು ವರ್ಗದವರೂ ತಪ್ಪದೆ ಮತದಾನ ಮಾಡುವಂತೆ ಉತ್ತೇಜಿಸುವುದು ಈ ಪ್ರಚಾರದ ಉದ್ದೇಶವಾಗಿದೆ’ ಎಂದು ತಿಳಿಸಿದರು.
ಅಂಗವಿಕಲರು, 85 ವರ್ಷ ದಾಟಿದವರು, ಲಿಂಗತ್ವ ಅಲ್ಪಸಂಖ್ಯಾತರು ಸಹಿತ ಎಲ್ಲ ಮತದಾರರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಬೇಕು. ತಪ್ಪದೇ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಅಂಗವಿಕಲರಿಗೆ ಮತದಾನ ಮಾಡುವ ವೇಳೆ ಸಮಸ್ಯೆಯಾಗದ ರೀತಿಯಲ್ಲಿ ಮತಗಟ್ಟೆಗಳ ಬಳಿ ರ‍್ಯಾಂಪ್ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಜಾಗೃತಿ ಜಾಥಾಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಚಾಲನೆ ನೀಡಿದರು. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಪ್ರಾರಂಭವಾಗಿ ಕೆ.ಆರ್ ವೃತ್ತ, ನೃಪತುಂಗ ರಸ್ತೆ, ಹಡ್ಸನ್ ವೃತ್ತದ ಮೂಲಕ ಕಂಠೀರವ ಕ್ರೀಡಾಂಗಣದವರೆಗೆ ಸಾಗಿ ಮುಕ್ತಾಯಗೊಂಡಿತು. ಅಂಗವಿಕಲರು ಮತ್ತು ಅಧಿಕಾರಿಗಳು ತಪ್ಪದೇ ಮತದಾನ ಮಾಡುವ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಯಾದ ಕೂರ್ಮ ರಾವ್, ಸ್ವೀಪ್ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಕಾಂತರಾಜ್, ಬೆಂಗಳೂರು ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.