ADVERTISEMENT

‘ಪಂಚಮಸಾಲಿ ಮೀಸಲಾತಿಗೆ ಆರ್‌ಎಸ್‌ಎಸ್ ಸಹಕರಿಸಲಿ’

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 20:51 IST
Last Updated 26 ಡಿಸೆಂಬರ್ 2020, 20:51 IST

ಧಾರವಾಡ: ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಲಿಂಗಾಯತರ ಕೊಡುಗೆ ಅಪಾರವಾಗಿದೆ. ಅದಕ್ಕಾಗಿ ಪಂಚಮಸಾಲಿ ಲಿಂಗಾಯತ ಸಮಾಜದ ಮೀಸಲಾತಿ ಬೇಡಿಕೆಯ ಈಡೇರಿಕೆಗೆ ಸಂಘ ಪರಿವಾರವೂ ಸಹಕಾರ ನೀಡ ಬೇಕು’ ಎಂದುಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯನ್ನು ಅವರ ಅವಧಿಯಲ್ಲಿಯೇ ನೀಡಬೇಕು. ಇದನ್ನು ಮುಖ್ಯಮಂತ್ರಿಗೆ ಆರ್‌ಎಸ್‌ಎಸ್ ಮನವರಿಕೆ ಮಾಡಿಕೊಡಬೇಕು’ ಎಂದರು.

‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಜ.14ರಿಂದ ಕೂಡಲ ಸಂಗಮದಿಂದ ಬೆಂಗಳೂರಿನ ವಿಧಾನಸೌಧದವರೆಗೂ ಪಾದಯಾತ್ರೆ ನಡೆಸಿ, ಮುತ್ತಿಗೆ ಹಾಕಲಾಗುವುದು. ಯಡಿಯೂರಪ್ಪ ಅವರು ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕ ಆಗಿ ಬಿಂಬಿಸಿಕೊಂಡಿದ್ದಾರೆ. ಅವರ ಮೇಲೆ ಪಂಚಮ ಸಾಲಿ ಸಮಾಜದ ಋಣಭಾರ ಬಹಳ ಇದೆ. ಈ ನಿಟ್ಟಿನಲ್ಲಿ ಮೀಸಲಾತಿ ಕಲ್ಪಿಸಲು ಪ್ರಯತ್ನಿಸಬೇಕು’ ಎಂದರು.

ADVERTISEMENT

‘ವೀರಪ್ಪ ಮೊಯ್ಲಿ ಅವರ ಕಾಲದಿಂದ ಇಲ್ಲಿಯವರೆಗಿನ ಎಲ್ಲ ಮುಖ್ಯಮಂತ್ರಿಯ ವರೆಗೂ ಮೀಸಲಾತಿ ಕೋರಿ ಸಾಕಾ ಗಿದೆ. ಹಾಗಾಗಿ ಈಗ ಹೋರಾಟ ಮಾಡುವುದು ಅನಿವಾರ್ಯವಾಗಿದೆ.ಸಮಾಜದ ಮಕ್ಕಳಿಗೆ ಶಿಕ್ಷಣ ಮತ್ತು ಯುವಕರಿಗೆ ಉದ್ಯೋಗ ಪಡೆಯಲು ಮೀಸಲಾತಿಯ ಅವಶ್ಯಕತೆ ಇದೆ. ಅದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ’ ಎಂದು ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.