ADVERTISEMENT

ಇಥಿಯೋಪಿಯಾದ ಮಕ್ಕಳಿಗೆ ನೆರವಾದ ‘ಜಯದೇವ’

ತೆರೆದ ಹೃದಯ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ಮಕ್ಕಳು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 15:49 IST
Last Updated 24 ಡಿಸೆಂಬರ್ 2024, 15:49 IST
ಶಸ್ತ್ರಚಿಕಿತ್ಸೆಗೆ ಒಳಪಟ್ಟ ಇಥಿಯೋಪಿಯಾ ಮಕ್ಕಳೊಂದಿಗೆ ಡಾ.ಕೆ.ಎಸ್. ರವೀಂದ್ರನಾಥ್ ಹಾಗೂ ವೈದ್ಯರು ಇದ್ದಾರೆ
ಶಸ್ತ್ರಚಿಕಿತ್ಸೆಗೆ ಒಳಪಟ್ಟ ಇಥಿಯೋಪಿಯಾ ಮಕ್ಕಳೊಂದಿಗೆ ಡಾ.ಕೆ.ಎಸ್. ರವೀಂದ್ರನಾಥ್ ಹಾಗೂ ವೈದ್ಯರು ಇದ್ದಾರೆ   

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಇಥಿಯೋಪಿಯಾದ ನಾಲ್ವರು ಮಕ್ಕಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದು, ಮಕ್ಕಳು ಚೇತರಿಸಿಕೊಂಡಿದ್ದಾರೆ. 

ಈ ಮಕ್ಕಳಲ್ಲಿ ಒಬ್ಬರಿಗೆ ಹೃದಯದಲ್ಲಿ ರಂಧ್ರವಿದ್ದರೆ, ಇಬ್ಬರ ಹೃದಯದ ಕವಾಟದಲ್ಲಿ ಸಮಸ್ಯೆಯಿತ್ತು. ಒಂದು ಮಗು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿತ್ತು. ನಾಲ್ಕೂ ಮಕ್ಕಳು ಪೂರ್ವ ಆಫ್ರಿಕಾದ ಇಥಿಯೋಪಿಯಾದವರಾಗಿದ್ದಾರೆ. ಅಡೀಸ್‌ ಅಬಾಬಾದಲ್ಲಿ ಶಸ್ತ್ರಚಿಕಿತ್ಸೆಗೆ ವರ್ಷಗಟ್ಟಲೆ ಕಾದ ಮಕ್ಕಳು, ಅಂತಿಮವಾಗಿ ಇಲ್ಲಿಗೆ ಬಂದಿದ್ದರು. ಡಿಸೆಂಬರ್‌ 4ರಂದು ದಾಖಲಾಗಿದ್ದ ಈ ಮಕ್ಕಳಿಗೆ, ಡಾ. ಪ್ರಸನ್ನಸಿಂಹ, ಡಾ. ದಿವ್ಯಾ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. 

‘ಪ್ರತಿ ಸಾವಿರ ಶಿಶುಗಳಲ್ಲಿ 8ರಿಂದ 10 ಶಿಶುಗಳು ಜನ್ಮಜಾತ ರೋಗಗಳನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಹೃದಯದಲ್ಲಿ ರಂಧ್ರವಾಗುವ ಅಥವಾ ಕವಾಟಗಳು ಕಿರಿದಾಗುವಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ರೀತಿ ಸಮಸ್ಯೆ ಹೊಂದಿರುವವರಿಗೆ ಜ್ವರ, ಕೆಮ್ಮು, ನೆಗಡಿ, ಬೆಳವಣಿಗೆ ಕುಂಠಿತಗೊಳ್ಳುವಿಕೆ, ಚರ್ಮ ಮತ್ತು ಉಗುರು ನೀಲಿ ಬಣ್ಣಕ್ಕೆ ತಿರುಗುವುದು ಸೇರಿ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ’ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ತಿಳಿಸಿದ್ದಾರೆ.

ADVERTISEMENT

‘ನಾಲ್ಕು ಮಕ್ಕಳ ಕುಟುಂಬಗಳೂ ಆರ್ಥಿಕ ಸಂಕಷ್ಟದಲ್ಲಿದ್ದವು. ಇಥಿಯೋ‍ಪಿಯಾದ ರೋಟರಿ ಇಂಟರ್‌ನ್ಯಾಷನಲ್, ಏರ್‌ಲೈನ್ಸ್ ಮತ್ತು ಚಿಲ್ಡ್ರನ್ಸ್ ಹಾರ್ಟ್ ಫಂಡ್, ಇಲ್ಲಿನ ರೋಟರಿ ಇಂಟರ್‌ನ್ಯಾಷನಲ್ 3190 ಮತ್ತು ರೋಟರಿ ನೀಡಿ ಹಾರ್ಟ್ ಫೌಂಡೇಶನ್ ಶಸ್ತ್ರಚಿಕಿತ್ಸೆಗೆ ನೆರವು ನೀಡಿದ್ದವು. ಇದರಿಂದಾಗಿ ಮಕ್ಕಳ ಚಿಕಿತ್ಸಾ ವರದಿಗಳನ್ನು ಅಧ್ಯಯನ ನಡೆಸಿ, ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈಗ ಮಕ್ಕಳು ಚೇತರಿಸಿಕೊಂಡಿದ್ದು, ಪೋಷಕರೊಂದಿಗೆ ಇಥಿಯೋಪಿಯಾಕ್ಕೆ ತೆರಳುತ್ತಿದ್ದಾರೆ. ಈ ಕ್ರಮವು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.