ADVERTISEMENT

ಫೇಸ್‌ಬುಕ್‌ನಲ್ಲಿ ನಿಂದನೆ: ಜೆಡಿಎಸ್‌ ಕಾರ್ಯಕರ್ತ ಬಂಧನ

​ಪ್ರಜಾವಾಣಿ ವಾರ್ತೆ
Published 7 ಮೇ 2020, 20:56 IST
Last Updated 7 ಮೇ 2020, 20:56 IST

ಬೆಂಗಳೂರು: ದಾಸರಹಳ್ಳಿ ಕ್ಷೇತ್ರದ ಬಿಜೆಪಿ ಮುಖಂಡ ಎಸ್. ಮುನಿರಾಜು ಕುರಿತು ತೇಜೋವಧೆ ಮತ್ತು ಆ ಪಕ್ಷದ ನಾಯಕರ ಭಾವಚಿತ್ರಗಳನ್ನು ತಿರುಚಿ ಅಶ್ಲೀಲ, ಅವಹೇಳನಕಾರಿಯಾಗಿ ಅಪ್‌ಲೋಡ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಆರೋಪದಲ್ಲಿ ಜೆಡಿಎಸ್ ಕಾರ್ಯಕರ್ತನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ದಾಸರಹಳ್ಳಿ ನಿವಾಸಿ ಚರಣ್ ಗೌಡ ಬಂಧಿತ. ಆತನ ವಿರುದ್ಧ ಮುನಿರಾಜು ಮತ್ತು ಬಿಜೆಪಿ ಕಾರ್ಯಕರ್ತರು ಮೂರು ಪ್ರತ್ಯೇಕ ದೂರು ನೀಡಿದ್ದರು.

ಸೈಬರ್‌ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ಕೊರೊನಾ ತಪಾಸಣೆಗೆ ಒಳಪಡಿಸುವಂತೆ ನ್ಯಾಯಾಲಯ ಸೂಚಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ಸ್ಮೃತಿ ಇರಾನಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ... ಹೀಗೆ ಹಲವು ಮುಖಂಡರ ಮುಖಗಳನ್ನು ಬೇರೆ ಚಿತ್ರಗಳ ಜೊತೆ ಸೇರಿಸಿ, ಅನಾಮಧೇಯ ಹೆಸರಿನಲ್ಲಿ ಹಲವು ತಿಂಗಳುಗಳಿಂದ ಫೇಸ್‌ಬುಕ್‌ ಖಾತೆಗಳಲ್ಲಿ ಪೋಸ್ಟ್ ಮಾಡಲಾಗುತ್ತಿತ್ತು. ಅವಹೇಳನಕಾರಿಯಾಗಿ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿತ್ತು. ತೇಜೋವಧೆ, ಅವಹೇಳನ ಕುರಿತು ನಾನು ದೂರು ನೀಡಿದ್ದೆ’ ಎಂದು ಮುನಿರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.