ADVERTISEMENT

ನೆಲಮಂಗಲ: ಬಂದೂಕು ತೋರಿಸಿ ರಾಜ್‌ ಜ್ಯುವೆಲರ್ಸ್‌ ಅಂಗಡಿಯಲ್ಲಿ ದರೋಡೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 15:40 IST
Last Updated 26 ಜುಲೈ 2025, 15:40 IST
   

ನೆಲಮಂಗಲ: ಚಿನ್ನಾಭರಣ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಚಿನ್ನಾಭರಣ ದೋಚಿ ಪರಾರಿ ಆಗಿರುವ ಘಟನೆ ಬೆಂಗಳೂರು ಉತ್ತರ ತಾಲ್ಲೂಕಿನ ಮಾಚೋಹಳ್ಳಿ ಗೇಟ್‌ ಬಳಿಯ ರಾಜ್‌ ಜ್ಯುವೆಲರ್ಸ್‌ನಲ್ಲಿ ನಡೆದಿದೆ.

ಗುರುವಾರ ರಾತ್ರಿ ಅಂಗಡಿ ಮುಚ್ಚುವ ವೇಳೆ ಮೂವರು ಏಕಾಏಕಿ ನುಗ್ಗಿ, ಬಂದೂಕು ಹಿಡಿದು ಬೆದರಿಸಿ ಆಭರಣಗಳನ್ನು ದೋಚಿ ಪರಾರಿ ಆಗಿದ್ದಾರೆ ಎಂದು ಪೊಲೀಸರು ಹೇಳಿದರು.

ಅಂಗಡಿ ಮಾಲೀಕ ಕನ್ನಯ್ಯಲಾಲ್ ಮತ್ತು ಸಿಬ್ಬಂದಿಯನ್ನು ತಳ್ಳಿ ಸುಮಾರು 250 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ್ದಾರೆ. ಘಟನಾ ಸಂದರ್ಭದಲ್ಲಿ ಮಾಲೀಕ ಹಾಗೂ ಸಿಬ್ಬಂದಿ ಕಿರುಚಾಡಿದ್ದಾರೆ. ಕೂಗಾಟ ಕೇಳಿ ಪಕ್ಕದ ಅಂಗಡಿಯವರು ರಕ್ಷಣೆಗೆ ಬಂದಿದ್ದು ಅವರನ್ನೂ ತಳ್ಳಿ ಆರೋಪಿಗಳು ಪರಾರಿ ಆಗಿದ್ದಾರೆ.

ADVERTISEMENT

ಕನ್ನಯ್ಯಲಾಲ್‌ ಅವರು ನೀಡಿದ ದೂರು ಆಧರಿಸಿ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.