ADVERTISEMENT

ಜ್ಞಾನಭಾರತಿ: ನಾಲ್ಕೂ ದಿಕ್ಕಿನಲ್ಲಿ ವೀಕ್ಷಣಾ ಗೋಪುರ

ಅಪರಾಧ ಕೃತ್ಯ ತಡೆಗಟ್ಟಲು ರೂಪಿಸಲಾದ ಯೋಜನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 19:32 IST
Last Updated 9 ಆಗಸ್ಟ್ 2019, 19:32 IST
   

ಬೆಂಗಳೂರು: ಬೆಂಗಳೂರು ವಿ.ವಿ. ಜ್ಞಾನಭಾರತಿ ಕ್ಯಾಂಪಸ್‌ ನಲ್ಲಿ ವಿದ್ಯಾರ್ಥಿಗಳಿಗೆ ಸುರಕ್ಷತೆ ಒದಗಿಸುವುದರ ಜತೆಗೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಲುವಾಗಿ ನಾಲ್ಕು ಆಯಕಟ್ಟಿನ ಸ್ಥಳಗಳಲ್ಲಿ ವೀಕ್ಷಣಾ ಗೋಪುರ ನಿರ್ಮಿಸಲು ನಿರ್ಧರಿಸಲಾಗಿದೆ.

ಈ ಗೋಪುರಗಳಲ್ಲಿ ಅತಿ ನಿಖರ ವಾಗಿ ಚಿತ್ರ ಸೆರೆಹಿಡಿಯುವ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಪ್ರತಿ ತಿಂಗಳು ಸರಾಸರಿ ಮೂರು ಅಪರಾಧ ಕೃತ್ಯಗಳು ಕ್ಯಾಂಪಸ್‌ನಲ್ಲಿ ನಡೆಯುತ್ತಿವೆ ಎಂಬ ಮಾಹಿತಿ ಜ್ಞಾನಭಾರತಿ ಪೊಲೀಸ್‌ ಠಾಣೆಯಿಂದ ಲಭಿಸಿದೆ.

ಈಚೆಗೆ ಕ್ಯಾಂಪಸ್‌ನಲ್ಲಿ ಕೊಳೆತ ಸ್ಥಿತಿ ಯಲ್ಲಿ ವ್ಯಕ್ತಿ ಶವ ಪತ್ತೆಯಾಗಿತ್ತು. ಅದಕ್ಕೆ ಮೊದಲು ಮಹಿಳಾ ಹಾಸ್ಟೆಲ್‌ ಸಮೀಪ ಬೆಳಿಗ್ಗೆ ಹೊತ್ತು ಅಡ್ಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ADVERTISEMENT

‘ಕ್ಯಾಂಪಸ್‌ನೊಳಗೆ ಹಗಲಿರುಳು ಭದ್ರತಾ ವ್ಯವಸ್ಥೆ ಇದ್ದರೂ, ಅದೂ ಸಾಕಾಗುತ್ತಿಲ್ಲ. ಹೊರಗಿನವರರಿಂದ ಅಪರಾಧ ಕೃತ್ಯಗಳು ಇಲ್ಲಿ ನಡೆಯುತ್ತಿವೆ. ಇದನ್ನು ತಪ್ಪಿಸಲು ವೀಕ್ಷಣಾ ಗೋಪುರ ನಿರ್ಮಿಸುವ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ತಿಳಿಸಿದರು.

‘ವೀಕ್ಷಣಾ ಗೋಪುರದಿಂದ ಕ್ಯಾಂಪಸ್‌ನೊಳಗೆ ಅಕ್ರಮ ಪ್ರವೇಶಕ್ಕೆ ಕಡಿವಾಣ ಬೀಳಲಿದೆ. ನಸುಕಿನಲ್ಲಿ ಇಲ್ಲಿ ಶ್ರೀಗಂಧದ ಮರಗಳನ್ನು ಕಡಿದ ಪ್ರಸಂಗವೂ ನಡೆದಿದೆ. ಕ್ಯಾಂಪಸ್‌ನ ಪ್ರತಿಯೊಂದು ಸ್ಥಳದ ಮೇಲೂ ಕಣ್ಣಿಡಲು ಭದ್ರತಾ ಸಿಬ್ಬಂದಿಗೂ ಕಷ್ಟವಿದೆ. ಇದಕ್ಕೆಲ್ಲ ಹೊಸ ಕ್ರಮದಿಂದ ಅನುಕೂಲ ಆಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.