ADVERTISEMENT

ಟೆಂಡರ್ ಕರೆದೇ ಕಾಮಗಾರಿ ನಡೆಸುವಂತೆ ಬಿಬಿಎಂಪಿಗೆ ಆದೇಶ

ಜ್ಞಾನಭಾರತಿ ವೈಟ್‌ ಟಾಪಿಂಗ್‌ ಕಾಮಗಾರಿ * ಟೆಂಡರ್‌ ಪ್ರಕ್ರಿಯೆ ತಪ್ಪಿಸಿಕೊಳ್ಳುವ ಬಿಬಿಎಂಪಿ ಪ್ರಯತ್ನಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 21:50 IST
Last Updated 13 ಡಿಸೆಂಬರ್ 2021, 21:50 IST
   

ಬೆಂಗಳೂರು: ವೈಟ್‌ ಟಾಪಿಂಗ್ ಎರಡನೇ ಹಂತದ ಯೋಜನೆಯಡಿ ಜ್ಞಾನಭಾರತಿ ಆವರಣದಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಟೆಂಡರ್ ಆಹ್ವಾನಿಸದೆಯೇ ನಡೆಸಲು ಮುಂದಾಗಿದ್ದ ಬಿಬಿಎಂಪಿ ಪ್ರಯತ್ನಕ್ಕೆ ಹಿನ್ನಡೆ ಆಗಿದೆ. ಟೆಂಡರ್‌ ಕರೆದೇ ಈ ಕಾಮಗಾರಿ ನಡೆಸುವಂತೆ ಸರ್ಕಾರ ಬಿಬಿಎಂಪಿಗೆ ಸೋಮವಾರ ನಿರ್ದೇಶನ ನೀಡಿದೆ.

ಬೆಂಗಳೂರಿನ ವಿಶೇಷ ಮೂಲಸೌಕರ್ಯ ಯೋಜನೆಯಡಿ2017–18ರಲ್ಲಿ ಸರ್ಕಾರ ಬಿಬಿಎಂಪಿಗೆ ₹2,191 ಕೋಟಿ ಅನುದಾನ ಮಂಜೂರು ಮಾಡಿತ್ತು. ಈ ಮೊತ್ತದಲ್ಲಿ ಎರಡನೇ ಹಂತದ ವೈಟ್‌ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಪ್ಯಾಕೇಜ್‌ನಲ್ಲಿ ಇಲ್ಲದ ಕಾಮಗಾರಿಯನ್ನು ಟೆಂಡರ್‌ ಕರೆಯದೆಯೇ ನಡೆಸಲು ಬಿಬಿಎಂಪಿ ಮುಂದಾಗಿತ್ತು.

‘ನಾಗರಬಾವಿ, ವಿಶ್ವೇಶ್ವರಯ್ಯ ಬಡಾವಣೆ, ಉಲ್ಲಾಳು, ರಾಜರಾಜೇಶ್ವರಿನಗರ, ಕೆಂಗೇರಿ ಮತ್ತು ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಜ್ಞಾನಭಾರತಿ ಆವರಣದ ಮೂಲಕ ಹಾದು ಹೋಗುತ್ತಿದೆ. ಮೈಸೂರು ರಸ್ತೆಯಲ್ಲಿ ಮೆಟ್ರೊ ರೈಲು ನಿಲ್ದಾಣ ಕೂಡ ಇದ್ದು, ವಾಹನ ದಟ್ಟಣೆ ಇನ್ನಷ್ಟು ಹೆಚ್ಚಾಗುತ್ತಿದೆ. ಈಗಿರುವ ರಸ್ತೆ ಹಾಳಾಗಿರುವುದರಿಂದ ವೈಟ್‌ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಬೇಕು’ ಎಂದುಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ ಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು.

ADVERTISEMENT

ಪ್ರಗತಿಯಲ್ಲಿರುವ ಯೋಜನೆಯಲ್ಲಿ ಉಳಿತಾಯ ಆಗಿರುವ ಮೊತ್ತ ಇದ್ದರೆ ಕಾಮಗಾರಿ ಕೈಗೆತ್ತಿಕೊಳ್ಳಲು ಅಂದಾಜುಪಟ್ಟಿ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದರು. ಮಹದೇವಪುರ, ಬ್ಯಾಟರಾಯನಪುರ, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ನಾಲ್ಕು ಕಾಮಗಾರಿಗಳನ್ನು ಕೈಬಿಟ್ಟು ಪ್ಯಾಕೇಜ್‌ನೊಳಗೆ ಜ್ಞಾನಭಾರತಿ ಆವರಣದ ಕಾಮಗಾರಿಯನ್ನು ಸೇರಿಸಲಾಗಿತ್ತು. ₹35.50 ಕೋಟಿ ಮೊತ್ತದಲ್ಲಿ ಆರು ಪಥದ ರಸ್ತೆ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಅವರಿಂದ ಅನುಮೋದನೆಯನ್ನೂ ಪಡೆಯಲಾಗಿತ್ತು. ಈ ಕಾಮಗಾರಿಗೆ ಹೊಸದಾಗಿ ಟೆಂಡರ್ ಕರೆಯಬೇಕು ಎಂಬ ಷರತ್ತನ್ನು ಸಡಿಲಗೊಳಿಸಲು ಬಿಬಿಎಂಪಿ ಮುಖ್ಯ ಆಯುಕ್ತರು ಪ್ರಸ್ತಾವನೆ ಸಲ್ಲಿಸಿದ್ದರು.

‘ಹೊಸದಾಗಿ ಟೆಂಡರ್ ಕರೆದರೆ ಮೂಲ ಗುತ್ತಿಗೆದಾರರಾದ ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಪ್ರವೈಟ್‌ ಲಿಮಿಟೆಡ್‌ನಿಂದ ₹35.50 ಕೋಟಿ ವಾಪಸ್ ಪಡೆಯಬೇಕಾಗುತ್ತದೆ. ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಯೂ ಇರುತ್ತದೆ. ಹೊಸದಾಗಿ ಟೆಂಡರ್ ಕರೆಯಲು ಮುಂದಾದರೆ ಮೊತ್ತ ಕೂಡ ಹೆಚ್ಚಾಗಲಿದೆ’ ಎಂದು ಕಾರಣ ನೀಡಿದ್ದರು.

ಈ ಕುರಿತು ‘ಪ್ರಜಾವಾಣಿ’ ನ.29ರಿಂದ ಸರಣಿ ವರದಿ ಪ್ರಕಟಿಸಿತ್ತು. ಟೆಂಡರ್ ಪ್ರಕ್ರಿಯೆ ನಡೆಸದೆ ಕಾಮಗಾರಿ ವಹಿಸುವ ಪ್ರಯತ್ನಕ್ಕೆ ಸಾರ್ವಜನಿಕ ವಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಸರ್ಕಾರ ಕಡೆಗೂ ನಿರ್ಧಾರ ಬದಲಿಸಿ ಟೆಂಡರ್ ಪ್ರಕ್ರಿಯೆ ನಡೆಸಲು ಬಿಬಿಎಂಪಿಗೆ ಸೂಚಿಸಿದೆ.

1.03 ಕಿಲೋ ಮೀಟರ್ ಉದ್ದದ ರಸ್ತೆಗೆ ₹35.50 ಕೋಟಿ ಖರ್ಚು ಮಾಡುತ್ತಿರುವ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿತ್ತು. 1.03 ಕಿ.ಮೀ ಅಲ್ಲ, 2.43 ಕಿ.ಮೀ ಉದ್ದದ ರಸ್ತೆಗೆ ವೈಟ್‌ ಟಾಪಿಂಗ್ ನಡೆಸಲಾಗುವುದು ಎಂದು ಬಿಬಿಎಂಪಿ ಸ್ಪಷ್ಟನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.