ADVERTISEMENT

991 ಅಭ್ಯರ್ಥಿಗಳಿಗೆ ಉದ್ಯೋಗ ಭಾಗ್ಯ

ಸರ್ಕಾರದಿಂದ ಆಯೋಜಿಸಿದ್ದ ಉದ್ಯೋಗ ಮೇಳ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 19:33 IST
Last Updated 13 ಫೆಬ್ರುವರಿ 2021, 19:33 IST
ಪೋಷಕರೊಂದಿಗೆ ಮೇಳದಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳು ಪ್ರಜಾವಾಣಿ ಚಿತ್ರ
ಪೋಷಕರೊಂದಿಗೆ ಮೇಳದಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳು ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ನಗರದ ಮಹಾರಾಣಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉದ್ಯೋಗಮೇಳದಲ್ಲಿ 991 ಅಭ್ಯರ್ಥಿಗಳು ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾದರು.

ಬೆಳಿಗ್ಗೆ 10ರಿಂದ 5ರವರೆಗೆ ನಡೆದ ಈ ಮೇಳದಲ್ಲಿ 2,158 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. 45 ಕಂಪನಿಗಳು ಸಂದರ್ಶನ ನಡೆಸಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡವು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಡಿಪ್ಲೊಮಾ ಪೂರೈಸಿದವರಿಗೆ ಕೆಲಸ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು.

ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ ಕುಲಪತಿ ಡಾ.ಎಲ್. ಗೋಮತಿದೇವಿ, ‘ಸರ್ಕಾರದ ಇಲಾಖೆಯೊಂದು ಮಹಾರಾಣಿ ಕಾಲೇಜಿನಲ್ಲಿ ಉದ್ಯೋಗಮೇಳ ನಡೆಸುತ್ತಿರುವುದು ಸ್ವಾಗತಾರ್ಹ. ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳೂ ಈಗ ಇಂಗ್ಲಿಷ್‌ ಜ್ಞಾನದಲ್ಲಿ, ಸಂವಹನ ಕಲೆಯಲ್ಲಿ ಸಾಕಷ್ಟು ಮುಂದುವರೆದಿದ್ದಾರೆ. ಸರ್ಕಾರ ಮತ್ತು ಖಾಸಗಿ ಕಂಪನಿಗಳು ಈ ವಿದ್ಯಾರ್ಥಿಗಳಿಗಾಗಿ ಇಂತಹ ಇನ್ನಷ್ಟು ಮೇಳಗಳನ್ನು ನಡೆಸಬೇಕು’ ಎಂದರು.

ADVERTISEMENT

‘ಅಭ್ಯರ್ಥಿಗಳು ಯಾವ ರೀತಿಯಲ್ಲಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು, ಕೌಶಲ ಅಭಿವೃದ್ಧಿ ಪಡಿಸಿಕೊಳ್ಳುವುದು ಹೇಗೆ ಎಂದು ಖಾಸಗಿ ಕಂಪನಿಗಳು ಸಲಹೆ ನೀಡಿದರೆ, ಆ ನಿಟ್ಟಿನಲ್ಲಿ ಶಿಕ್ಷಣ ನೀಡಲು ಪ್ರಯತ್ನಿಸುತ್ತೇವೆ’ ಎಂದೂ ಹೇಳಿದರು.

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಕೆ.ಎಂ. ಸನತ್‌ಕುಮಾರ್, ‘ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯಡಿ ಈ ಮೇಳಹಮ್ಮಿಕೊಳ್ಳಲಾಗಿದೆ. ತಿಂಗಳಲ್ಲಿ ಈ ರೀತಿಯ ಎರಡು ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವಿದೆ. ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.