ADVERTISEMENT

₹ 50 ಲಕ್ಷ ಮೊತ್ತದ ಚಿನ್ನಾಭರಣ ಕಳವು

ಉದ್ಯಮಿಯಿಂದ ದೂರು: ಕೆಲಸದವರ ಮೇಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 19:41 IST
Last Updated 28 ಏಪ್ರಿಲ್ 2019, 19:41 IST

ಬೆಂಗಳೂರು: ಜೆ.ಸಿ.ನಗರದ ಮಿತ್ತಲ್ ಲಕ್ಸುರಿ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ನ ಬಾಗಿಲು ಒಡೆದು ಒಳನುಗ್ಗಿದ್ದ ದುಷ್ಕರ್ಮಿಗಳು, ₹50 ಲಕ್ಷ ಮೊತ್ತದ ವಜ್ರದ ಆಭರಣ ಹಾಗೂ ₹10 ಲಕ್ಷ ನಗದು ಕದ್ದೊಯ್ದಿದ್ದಾರೆ.

ಉದ್ಯಮಿ ಸಚಿನ್ ಭಾರತ್ ಎಂಬುವರ ಫ್ಲ್ಯಾಟ್‌ನಲ್ಲಿ ಕಳ್ಳತನ ನಡೆದಿದ್ದು, ಆ ಸಂಬಂಧ ಜೆ.ಸಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಮನೆಯ ಕೆಲಸದಾಳು ಮಾಲತಿ, ರೋಷನ್, ಪಿಂಟು ಎಂಬುವರ ಮೇಲೆ ಅನುಮಾನವಿದೆ’ ಎಂದು ಉದ್ಯಮಿ ದೂರಿನಲ್ಲಿ ತಿಳಿಸಿದ್ದಾರೆ. ಕೆಲಸದವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

‘ಸಚಿನ್ ಅವರು ಕುಟುಂಬ ಸಮೇತ ಏಪ್ರಿಲ್ 8ರಂದು ಇಟೆಲಿ ಪ್ರವಾಸಕ್ಕೆ ತೆರಳಿದ್ದರು. ಯಾರೂ ಇಲ್ಲದ ಸಮಯದಲ್ಲೇ ಕಳ್ಳರು, ಮನೆಯ ಲಾಕರ್ ಹಾಗೂ ಬೀರು ಒಡೆದು ವಜ್ರದ ಉಂಗುರ, ವಜ್ರದ ಕೈ ಗಡಿಯಾರ ಸೇರಿದಂತೆ ₹ 50 ಲಕ್ಷ ಮೊತ್ತದ ಆಭರಣ ಕದ್ದಿದ್ದಾರೆ’ ಎಂದು ಜೆ.ಸಿ.ನಗರ ಪೊಲೀಸರು ಹೇಳಿದರು.

ADVERTISEMENT

‘ಉದ್ಯಮಿ ಕುಟುಂಬಪ್ರವಾಸ ಮುಗಿಸಿ ಏಪ್ರಿಲ್ 26ರಂದು ಮನೆಗೆ ವಾಪಸು ಬಂದಾಗಲೇ ಕಳ್ಳತನದ ವಿಚಾರ ಗೊತ್ತಾಗಿದೆ. ಮನೆ ಸಮೀಪದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.