ADVERTISEMENT

ಶಿವರಾಮ ಕಾರಂತ ಬಡಾವಣೆ ಯೋಜನೆಗೆ ಭೂಮಿ ನೀಡಿದ ರೈತರಿಗೆ ನಿವೇಶನ ನೀಡಲು ಸಿದ್ಧತೆ

ಕೆ.ಎಸ್.ಸುನಿಲ್
Published 9 ಡಿಸೆಂಬರ್ 2025, 0:51 IST
Last Updated 9 ಡಿಸೆಂಬರ್ 2025, 0:51 IST
ಶಿವರಾಮ ಕಾರಂತ ಬಡಾವಣೆ
ಶಿವರಾಮ ಕಾರಂತ ಬಡಾವಣೆ   

ಬೆಂಗಳೂರು: ನಗರದ ಉತ್ತರ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಕೆ.ಶಿವರಾಮ ಕಾರಂತ (ಎಸ್‌.ಕೆ) ಬಡಾವಣೆಯ ಯೋಜನೆಗೆ ಜಮೀನು ನೀಡಿರುವ ರೈತರಿಗೆ ನಿವೇಶನ ಹಂಚಿಕೆ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಿದ್ಧತೆ ನಡೆಸಿದೆ.

ಮೊದಲ ಹಂತದಲ್ಲಿ ಐದು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ನಿರ್ಧರಿಸಿರುವ ಪ್ರಾಧಿಕಾರ, ಭೂಮಿ ಬಿಟ್ಟುಕೊಟ್ಟಿರುವ ರೈತರಿಂದ ಪ್ರತ್ಯೇಕವಾಗಿ ಶೀಘ್ರ ಅರ್ಜಿ ಆಹ್ವಾನಿಸಲಿದೆ. 60:40ರ ಅನುಪಾತದಲ್ಲಿ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಆದರೆ, ಸಂತ್ರಸ್ತ ರೈತರು 50:50 ಅನುಪಾತದಲ್ಲಿ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಹಲವು ವರ್ಷಗಳ ಕಾನೂನು ಹೋರಾಟ, ವಿಳಂಬದಿಂದ ಭೂಮಾಲೀಕರು ಬೇಸತ್ತಿದ್ದು, ಕಾನೂನು ತೊಡಕಗಳು ಬಗೆಹರಿಯುವತ್ತ ಸಾಗುತ್ತಿದೆ. ಎಸ್‌.ಕೆ. ಬಡಾವಣೆ ಯೋಜನೆಗೆ ಜಮೀನು ನೀಡಿದವರಿಗೆ ನಿವೇಶನ ಹಂಚಿಕೆ ಮಾಡಲು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದ ಅನುಸಾರ, ಹೈಕೋರ್ಟ್ ಭೂ ಮಾಲೀಕರಿಗೆ ನಿವೇಶನ ಹಂಚಿಕೆ ಮಾಡಲು ಪ್ರಾಧಿಕಾರಕ್ಕೆ ಅನುಮತಿ ನೀಡಿದೆ.  

ADVERTISEMENT

‘ಎಸ್‌.ಕೆ.ಬಡಾವಣೆಗೆ ಜಮೀನು ಬಿಟ್ಟುಕೊಟ್ಟಿರುವ ರೈತರಿಗೆ 2008ರ ತೀರ್ಮಾನದಂತೆ 60:40 ಅನುಪಾತದಲ್ಲಿ ಪರಿಹಾರ ನೀಡಲಾಗುತ್ತದೆ. ಒಂದು ಎಕರೆ ಭೂಮಿ ಬಿಟ್ಟುಕೊಟ್ಟ ರೈತರಿಗೆ 9,583 ಚದರ ಅಡಿ ಅಭಿವೃದ್ಧಿಪಡಿಸಿದ ನಿವೇಶನಗಳು ಹಂಚಿಕೆಯಾಗಲಿವೆ. ಐದು ಸಾವಿರ ನಿವೇಶನ ಹಂಚಲು ಯೋಜಿಸಲಾಗಿದೆ. ಪರಿಹಾರ ವಿಚಾರ ಬಹಳ ಹಿಂದೆಯೇ ನಿರ್ಧರವಾಗಿದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

‘ಅರ್ಜಿಗಳನ್ನು ಸ್ವೀಕರಿಸಲು ಮತ್ತು ನಿವೇಶನಗಳನ್ನು ವಿತರಿಸಲು ಪ್ರಾಧಿಕಾರವು ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದೆ. ರೈತರ ಮಾಹಿತಿ ಹಾಗೂ ಭೂಮಿ ವಿಸ್ತೀರ್ಣವನ್ನು ಅಳವಡಿಸಲಾಗುತ್ತಿದೆ. ಪಾರದರ್ಶಕತೆ ಕಾಪಾಡಲು ಮತ್ತು ಮಾನವ ಹಸ್ತಕ್ಷೇಪ ತಡೆಗೆ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಹಿಂದಿನ ತಪ್ಪು ಮರುಕಳಿಸದಂತೆ ನೋಡಿಕೊಳ್ಳಲಾಗುವುದು. ಮೊದಲು ಪ್ರಾಯೋಗಿಕವಾಗಿ ಜಾರಿ ಮಾಡಲಾಗುವುದು. ಡಿಸೆಂಬರ್ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ’ ಎಂದರು.

ಬಿಡಿಎ ಅಭಿವೃದ್ಧಿಪಡಿಸುತ್ತಿರುವ ಈ ಯೋಜನೆಗೆ 3,837 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆಯಾಗಿತ್ತು. ಈ ಪೈಕಿ 3,546 ಎಕರೆ ಭೂಮಿಯಲ್ಲಿ 9 ಬ್ಲಾಕ್‌ಗಳನ್ನಾಗಿ ಮಾಡಿ , ವಿವಿಧ ಅಳತೆಯ ಸುಮಾರು 34 ಸಾವಿರ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಉತ್ತರ ಬೆಂಗಳೂರಿನ 17 ಗ್ರಾಮಗಳನ್ನು ಒಳಗೊಂಡಿದೆ. ಹೈಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳಿಂದಾಗಿ ಸ್ಥಗಿತಗೊಂಡಿರುವ ಕೆಲ ಪ್ರದೇಶಗಳನ್ನು ಹೊರತುಪಡಿಸಿ, ಉಳಿದ ಪ್ರದೇಶಗಳ ನಿವೇಶನ ಹಂಚಿಕೆಗೆ ಸಿದ್ಧತೆ ನಡೆದಿದೆ.

‘ನ್ಯಾಯಾಲಯ ಆದೇಶ ನೀಡಿದ ಕೂಡಲೇ ಸಾರ್ವಜನಿಕರಿಗೆ ನಿವೇಶನಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಅಂದಾಜು 10-12 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಕಾರಂತ ಬಡಾವಣೆ ವಿಸ್ತರಣೆಗೆ ಯಲಹಂಕ ಹಾಗೂ ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಒಟ್ಟು 18 ಗ್ರಾಮಗಳನ್ನು ಗುರುತಿಸಲಾಗಿದ್ದು, ಅಂದಾಜು ಮೂರು ಸಾವಿರ ಎಕರೆ ಜಮೀನು ಅಗತ್ಯವಿದೆ.

  • ಬಡಾವಣೆ ವಿಸ್ತೀರ್ಣ :3,546 ಎಕರೆ

  • ಸಿದ್ದಗೊಂಡಿರುವ ನಿವೇಶನ: 34,000

  • ಒಳಪಟ್ಟಿರುವ ಗ್ರಾಮಗಳು‌: 17

50:50 ಅನುಪಾತದ ಪರಿಹಾರಕ್ಕೆ ಆಗ್ರಹ

‘ಎಸ್‌.ಕೆ. ಬಡಾವಣೆಗೆ ಜಮೀನು ನೀಡಿದ ರೈತರಿಗೆ 50:50 ಅನುಪಾತದಲ್ಲಿ ನಿವೇಶನ ನೀಡಬೇಕು. ಅಭಿವೃದ್ಧಿಪಡಿಸಿದ 100 80 ಹಾಗೂ 60 ಅಡಿ ರಸ್ತೆಗಳಿಗೆ ಹೊಂದಿಕೊಂಡಂತೆ ವಾಣಿಜ್ಯ ಹಾಗೂ ಮೂಲೆ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಪ್ರಾಧಿಕಾರದ ಆಯುಕ್ತರಿಗೆ ಮನವಿ ಮಾಡಲಾಗಿದೆ. ವಾಣಿಜ್ಯ ಮತ್ತು ಮೂಲೆ ನಿವೇಶನ ನೀಡಬೇಕು’ ಎಂದು ಸಂತ್ರಸ್ತ ರೈತ ರಾಮಗೊಂಡನಹಳ್ಳಿ ಎಂ.ರಮೇಶ್ ಆಗ್ರಹಿಸಿದ್ದಾರೆ. ‘ನಮ್ಮ ಕುಟುಂಬವು ಯೋಜನೆಗೆ 39 ಗುಂಟೆ ಜಮೀನು ಬಿಟ್ಟುಕೊಟ್ಟಿದೆ. 20 ವರ್ಷ ಕಳೆದರೂ ಪರಿಹಾರ ನೀಡಿಲ್ಲ. ಅಲ್ಲದೇ ಪ್ರಾಧಿಕಾರವು ಪುರೋಭಿವೃದ್ಧಿ ತೆರಿಗೆಯನ್ನು (ಅಭಿವೃದ್ಧಿ ತೆರಿಗೆ) ಅವೈಜ್ಞಾನಿಕವಾಗಿ 17 ಗ್ರಾಮಗಳಿಗೆ ವಿಧಿಸಿದೆ. ಉದಾಹರಣೆಗೆ ಬೆಟ್ಟಹಳ್ಳಿ ಗ್ರಾಮದಲ್ಲಿ ಚದರ ಅಡಿಗೆ ₹552ಕೆಂಪನಹಳ್ಳಿಗೆ ₹42 ರಾಮಗೊಂಡನಹಳ್ಳಿಗೆ ₹1028 ವೀರಸಾಗರಕ್ಕೆ ₹65 ಪುರೋಭಿವೃದ್ಧಿ ಶುಲ್ಕ ವಿಧಿಸಲಾಗಿದೆ. ಒಂದೊಂದು ಗ್ರಾಮಗಳಿಗೆ ಒಂದೊಂದು ರೀತಿ ಶುಲ್ಕ ವಿಧಿಸಿರುವುದು ಅವೈಜ್ಞಾನಿಕವಾಗಿದೆ’ ಎಂದು ಹೇಳಿದರು. ‘ಈ ಯೋಜನೆ ಅನುಷ್ಠಾನಕ್ಕೆ ಎರಡು ದಶಕ ಆಗಿರುವ ಕಾರಣ ಬಿಡಿಎ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪುರೋಭಿವೃದ್ಧಿ ಶುಲ್ಕವನ್ನು ಕಡಿಮೆ ಮಾಡಬೇಕು. ಮಾರ್ಗಸೂಚಿ ದರದ ಪ್ರಕಾರ ಶುಲ್ಕ ನಿಗದಿ ಮಾಡಿರುವುದು ಸರಿಯಲ್ಲ. ಕೆಲ ಹಳ್ಳಿಗಳಲ್ಲಿ 30X40 ಅಡಿ ಅಳತೆಯ ನಿವೇಶನಕ್ಕೆ ಅಂದಾಜು ಒಂದು ಲಕ್ಷ ರೂಪಾಯಿವರೆಗೂ ಶುಲ್ಕ ಪಾವತಿಸಬೇಕಾಗಬಹುದು’ ಎಂದು ವೀರಸಾಗರ ನಿವಾಸಿ ವಸಂತ್ ಕುಮಾರ್ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.