ADVERTISEMENT

‘ಡಾಕ್ಟರೇಟ್ ಆಮಿಷ ಒಡ್ಡಿದವರು ಜೈಲಿಗೆ ಹೋದರು’

ಹಳೆಯ ಘಟನೆಯ ನೆನಪಿಸಿಕೊಂಡ ಎಸ್. ಸುರೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 19:46 IST
Last Updated 16 ಅಕ್ಟೋಬರ್ 2019, 19:46 IST
ಎಸ್. ಷಡಕ್ಷರಿ ಹಾಗೂ ಪ್ರೊ. ಮೀನಾ ದೇಶಪಾಂಡೆ ಅವರಿಗೆ ಪರಿಷತ್ತಿನ ದತ್ತಿ ಪ್ರಶಸ್ತಿಗಳನ್ನು ಎಸ್. ಸುರೇಶ್ ಕುಮಾರ್ ಪ್ರದಾನ ಮಾಡಿದರು. ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ವ.ಚ. ಚನ್ನೇಗೌಡ, ರಾಜಶೇಖರ ಹತಗುಂದಿ, ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ, ಅಧ್ಯಕ್ಷ ಮನು ಬಳಿಗಾರ್ ಹಾಗೂ ಗಾಂಧಿವಾದಿ ಎ.ಆರ್. ನಾರಾಯಣಘಟ್ಟ ಇದ್ದರು –ಪ್ರಜಾವಾಣಿ ಚಿತ್ರ
ಎಸ್. ಷಡಕ್ಷರಿ ಹಾಗೂ ಪ್ರೊ. ಮೀನಾ ದೇಶಪಾಂಡೆ ಅವರಿಗೆ ಪರಿಷತ್ತಿನ ದತ್ತಿ ಪ್ರಶಸ್ತಿಗಳನ್ನು ಎಸ್. ಸುರೇಶ್ ಕುಮಾರ್ ಪ್ರದಾನ ಮಾಡಿದರು. ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ವ.ಚ. ಚನ್ನೇಗೌಡ, ರಾಜಶೇಖರ ಹತಗುಂದಿ, ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ, ಅಧ್ಯಕ್ಷ ಮನು ಬಳಿಗಾರ್ ಹಾಗೂ ಗಾಂಧಿವಾದಿ ಎ.ಆರ್. ನಾರಾಯಣಘಟ್ಟ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಗೌರವ ಡಾಕ್ಟರೇಟ್‌ ಪದವಿ ನೀಡುವುದಾಗಿ ವರ್ಷಗಳ ಹಿಂದೆ ಪತ್ರವೊಂದು ಬಂದಿತ್ತು. ಪದವಿ ಪಡೆಯಲು ₹ 1.5 ಲಕ್ಷ ನೀಡುವಂತೆ ಬೇಡಿಕೆ ಇಡಲಾಗಿತ್ತು. ಅಷ್ಟೇ ಅಲ್ಲ, ಪತ್ರದ ಜತೆಗೆ ಆಮಂತ್ರಣ ಪತ್ರಿಕೆಯನ್ನೂ ಕಳುಹಿಸಲಾಗಿತ್ತು. ಅಷ್ಟು ಹಣವನ್ನು ನೀಡಿದಲ್ಲಿ ಇಂದು ನಾನು ಕೂಡಾ ಡಾಕ್ಟರ್‌ ಆಗುತ್ತಿದೆ. ಆದರೆ, ಪೊಲೀಸರಿಗೆ ದೂರು ನೀಡಿದ ಪರಿಣಾಮ ಆಮಿಷ ಒಡ್ಡಿದವರು ಜೈಲಿಗೆ ಹೋದರು’.

–ಹೀಗೆ ಹಳೆಯ ಘಟನೆಯೊಂದನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ನೆನಪಿಸಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರೊ. ಮೀನಾ ದೇಶಪಾಂಡೆ ಅವರಿಗೆ ‘ಎ.ಆರ್. ನಾರಾಯಣಘಟ್ಟ, ಸರೋಜಮ್ಮ ಗಾಂಧಿ ಪುದುವಟ್ಟು ಪ್ರಶಸ್ತಿ’ ಹಾಗೂ ಎಸ್. ಷಡಕ್ಷರಿ ಅವರಿಗೆ ‘ಲಕ್ಷ್ಮೀದೇವಿ ಮತ್ತು ಎಸ್. ರಾಮಚಂದ್ರ ಬಾಯರ್ ದತ್ತಿ ಪ್ರಶಸ್ತಿ’ ಪ್ರದಾನ ಮಾಡಿದರು. ಈ ಪ್ರಶಸ್ತಿಗಳು ಕ್ರಮವಾಗಿ ₹ 10 ಸಾವಿರ ಹಾಗೂ ₹ 5 ಸಾವಿರ ನಗದು ಬಹುಮಾನ ಹೊಂದಿವೆ.

‘ನನಗೆ ಬಂದ ಪತ್ರದ ಜತೆಗಿನ ಆಮಂತ್ರಣ ಪತ್ರಿಕೆಯಲ್ಲಿ ಡಿಜಿಪಿ ರೂಪ್‌ಕುಮಾರ್‌ ದತ್ತ ಅವರುಡಾಕ್ಟರೇಟ್‌ ಪದವಿ ಪ್ರದಾನ ಮಾಡಲಿದ್ದಾರೆ ಎಂದು ನಮೂದಿಸಲಾಗಿತ್ತು. ಹೀಗಾಗಿರೂಪ್‌ಕುಮಾರ್‌ ದತ್ತ ಅವರ ಕಚೇರಿಗೆ ತೆರಳಿ, ವಿಚಾರಿಸಿದೆ. ಅಚ್ಚರಿಗೊಂಡ ಅವರು, ನಗರ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಅವರಿಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದರು. ಇದರಿಂದಾಗಿಡಾಕ್ಟರೇಟ್‌ ನೀಡಲು ಬಂದವರು ಪರಪ್ಪನ ಅಗ್ರಹಾರ ಸೇರಬೇಕಾಯಿತು’ ಎಂದು ಸುರೇಶ್ ಕುಮಾರ್ ತಿಳಿಸಿದರು.

ADVERTISEMENT

‘ಪ್ರಶಸ್ತಿಗಳಿಗೆ ಲಾಭಿ ಒಂದೇ ಸಮನೆ ಹೆಚ್ಚುತ್ತಿದೆ. ಗೌರವ ಡಾಕ್ಟರೇಟ್‌ ಪದವಿಗಳನ್ನು ಮಾರಾಟ ಮಾಡಲಾಗುತ್ತಿದೆ. ಹಣ ಕೊಟ್ಟರೆ ಯಾರು ಕೂಡಾ ಡಾಕ್ಟರೇಟ್‌ ಪದವಿ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿಯಲ್ಲಿ ಪಾರದರ್ಶಕತೆ ಉಳಿಸಿಕೊಂಡಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶಸ್ತಿ ಪುರಸ್ಕೃತೆ ಪ್ರೊ. ಮೀನಾ ದೇಶಪಾಂಡೆ, ‘ದತ್ತಿ ಪ್ರಶಸ್ತಿ ಗಾಂಧಿ ಬಳಗಕ್ಕೆ ಸಿಕ್ಕ ಗೌರವವಾಗಿದೆ. ಗಾಂಧೀಜಿಯ ಸಮಗ್ರ ಜೀವನ ಹಾಗೂ ಸಾಹಿತ್ಯವನ್ನು 100 ಸಂಪಟದಲ್ಲಿ ಕನ್ನಡಕ್ಕೆ ತರಲಾಗುತ್ತಿದ್ದು, ಈಗಾಗಲೇ 24 ಸಂಪುಟ ಸಿದ್ಧವಾಗಿದೆ. ಅನುವಾದಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.