ADVERTISEMENT

‘ಅತ್ಯುತ್ತಮ ಪಠ್ಯವೇ ನೈಜ ಸಮಕಾಲೀನ ಸಾಹಿತ್ಯ’

ಕಾಡುವ ಕಿ.ರಂ– ಸಾಮಾಜಿಕ ಜಾಲತಾಣದಲ್ಲಿ ಸಾಹಿತ್ಯಲೋಕ ದಿಗ್ಗಜರ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 3:35 IST
Last Updated 8 ಆಗಸ್ಟ್ 2020, 3:35 IST
ಕಿ.ರಂ.ನಾಗರಾಜ್
ಕಿ.ರಂ.ನಾಗರಾಜ್   

ಬೆಂಗಳೂರು: ವಿಮರ್ಶಕ ಕಿ.ರಂ. ನಾಗರಾಜ್‌ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಸಾಹಿತ್ಯ ಪ್ರೇಮಿಗಳು ಶುಕ್ರವಾರ ವಿಭಿನ್ನವಾಗಿ ಸ್ಮರಿಸಿಕೊಂಡರು. ಅವರ ನಾಟಕಗಳನ್ನು ಓದುವ ಮೂಲಕ, ಕಾವ್ಯವಾಚಿಸುವ ಮೂಲಕ ‘ಸಾಹಿತ್ಯ ನಮನ’ ಸಲ್ಲಿಸಿದರು. ಶನಿವಾರ ಅಹೋರಾತ್ರಿ ನಡೆದ ‘ಕಾಡುವ ಕಿರಂ’ ಭಾನುವಾರವೂ ಮುಂದುವರಿಯಲಿದೆ.

ಜನ ಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಆರ್ಟ್‌ ಫೌಂಡೇಷನ್‌ ‘ಫೇಸ್‌ಬುಕ್‌’ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

‘ಕಾವ್ಯ ಮತ್ತು ಸಮಕಾಲೀನ ಸಮಾಜ’ ಕುರಿತು ಉಪನ್ಯಾಸ ನೀಡಿದ ಜಾನಪದ ತಜ್ಞ ಪ್ರೊ. ಪುರುಷೋತ್ತಮ ಬಿಳಿಮಲೆ, ‘ನಿರ್ಜೀವ ಪಠ್ಯಗಳನ್ನು ರಂಗದ ಮೇಲೆ ತಂದು ಅವುಗಳಿಗೆ ಜೀವ ತುಂಬಿದವರು ಪ್ರೊ. ಕಿ.ರಂ. ನಾಗರಾಜ್.ಅತ್ಯುತ್ತಮವಾದ ಪಠ್ಯವೇ ಸಮಕಾಲೀನ ಸಾಹಿತ್ಯ ಎಂಬುದನ್ನು ಅವರು ನಿರೂಪಿಸಿದ್ದರು’ ಎಂದರು.

ADVERTISEMENT

‘ಪಂಪ, ಕುಮಾರವ್ಯಾಸನ ಪದ್ಯವೋ ಅಥವಾ ಯಾವುದೇ ಹಳೆಗನ್ನಡದ ಕಾವ್ಯವೋ ಈ ರೀತಿ ನಾಟಕಕ್ಕೆ ರೂಪಾಂತರಗೊಂಡರೆ, ಭಾಗವತದಲ್ಲಿ ಪ್ರಸ್ತಾಪವಾದರೆ ಅದು ಮತ್ತೆ ಜೀವ ಪಡೆದುಕೊಳ್ಳುತ್ತದೆ. 15ನೇ ಶತಮಾನದ ಪಠ್ಯವೂ, 21ನೇ ಶತಮಾನದಲ್ಲಿ ಸಮಕಾಲೀನ ಎನಿಸಿಕೊಳ್ಳುವುದು ಇಂತಹ ಪ್ರಯೋಗಗಳಿಂದ. ಈ ನಿಟ್ಟಿನಲ್ಲಿ ಕಿ.ರಂ. ಕೊಡುಗೆ ಅಪಾರ’ ಎಂದರು.

‘ಓದುವ ಕ್ರಮ ಗೊತ್ತಿದ್ದರೆ, ಕಾವ್ಯಗಳು ಕೂಡ ಸಮಕಾಲೀನವಾಗುತ್ತವೆ. ಇಂತಹ ಓದುವ ಕ್ರಮ ರೂಢಿಸಿದ್ದ ಕಿ.ರಂ. ಅವರಲ್ಲಿ ಅಪೂರ್ವವಾದ ಒಳನೋಟಗಳು ಕಾಣುತ್ತಿದ್ದವು. ಕಾವ್ಯಗಳನ್ನು, ನಾಟಕಗಳನ್ನು ರಾತ್ರಿ–ಹಗಲುಗಳ ವ್ಯತ್ಯಾಸವಿಲ್ಲದೆ ಎಲ್ಲರ ಹೃದಯಕ್ಕೆ ಅವುಗಳನ್ನು ಅವರು ತಲುಪಿಸುತ್ತಿದ್ದರು’ ಎಂದು ಸ್ಮರಿಸಿಕೊಂಡರು.

ಮೈಸೂರು, ಉಡುಪಿಯಲ್ಲಿ ವೇದಿಕೆ ಕಾರ್ಯಕ್ರಮ ನಡೆದರೆ, ಬೆಂಗಳೂರಿನಲ್ಲಿ ಅನೇಕರು ಸಾಮಾಜಿಕ ಮಾಧ್ಯಮಗಳ ಮೂಲಕವೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಫೇಸ್‌ಬುಕ್‌ನಲ್ಲಿಕಿ.ರಂ ನಾಟಕಗಳ ವಾಚನ ಮಾಡಿದ ಅನೇಕರು, ಅವರ ಒಡನಾಟದ ಬಗ್ಗೆ, ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಗಳ ಕುರಿತು ಮಾತನಾಡಿದರು.

ಸೃಜನಶೀಲ ಕುಮಾರವ್ಯಾಸ ಕುರಿತು ಕಾಳೇಗೌಡ ನಾಗವಾರ ಹಾಗೂ ಹೊಸ ಶಿಕ್ಷಣ ನೀತಿ ಮತ್ತು ಭಾರತೀಯ ಭಾಷೆಗ ಸವಾಲುಗಳು ಕುರಿತು ರಂಗನಾಥ ವಿಷಯ ಮಂಡಿಸಿದರೆ, ಮಹಾದೇವಿ ಅಕ್ಕನ ಕಾವ್ಯದ ಬಗ್ಗೆ ಡಾ.ಎಂ. ಉಷಾ ಮಾತನಾಡಿದರು. ಎಚ್.ಎಸ್. ಶಿವಪ್ರಕಾಶ ಅವರ ಕಾವ್ಯದ ಬಗ್ಗೆ ಪ್ರಕಾಶ್‌ ಬಡವನಹಳ್ಳಿ ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.