ADVERTISEMENT

‘ಬಲಿಜ ಸಮಾಜವನ್ನು ಬಲಿಷ್ಠ ಸಮಾಜವನ್ನಾಗಿಸಲು ಕ್ರಮ’: ಕೈವಾರ ತಾತಯ್ಯ ಜಯಂತಿ ಆಚರಣೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ *ಕೈವಾರ ತಾತಯ್ಯ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 20:54 IST
Last Updated 27 ಮಾರ್ಚ್ 2022, 20:54 IST
ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ, ಪಿ.ಸಿ. ಮೋಹನ್ ಹಾಗೂ ಸುನೀಲ್ ಕುಮಾರ್ ಅವರು ಕೈವಾರ ತಾತಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ, ಪಿ.ಸಿ. ಮೋಹನ್ ಹಾಗೂ ಸುನೀಲ್ ಕುಮಾರ್ ಅವರು ಕೈವಾರ ತಾತಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.   

ಬೆಂಗಳೂರು: ‘ಬಲಿಜ ಸಮಾಜವನ್ನು ಬಲಿಷ್ಠ ಸಮಾಜವನ್ನಾಗಿ ರೂಪಿಸುತ್ತೇವೆ. ಈ ಸಮಾಜದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗ ಒದಗಿಸಲು ಕ್ರಮ ವಹಿಸಲಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಯೋಗಿನಾರೇಯಣ ಯತೀಂದ್ರ ಕೈವಾರ ತಾತಯ್ಯ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ‘ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿ ನಮ್ಮ ಬದ್ಧತೆ. ಈಗಾಗಲೇ ಇರುವ ಕಾರ್ಯಕ್ರಮಗಳಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿ ಇರಬೇಕು. ಹೀಗಾಗಿ, ವೈಚಾರಿಕತೆಯ ಪ್ರಚಾರವೂ ಸರ್ಕಾರದ ಕರ್ತವ್ಯ. ಕೈವಾರತಾತಯ್ಯ ಅವರು ನಾಡಿಗೆ ಸ್ಫೂರ್ತಿ. ಅವರ ತತ್ವ, ಆದರ್ಶದ ಮೇಲೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು.ಅವರ ತತ್ವಪದ ಇಂದಿಗೂ ಪ್ರಸ್ತುತ. ಅವರ ಕೀರ್ತನೆಗಳು ಮಾರ್ಗದರ್ಶನ ಮಾಡುತ್ತವೆ’ ಎಂದರು.

ADVERTISEMENT

ವಿಧಾನ ಸಭಾಧ್ಯಕ್ಷವಿಶ್ವೇಶ್ವರ ಹೆಗಡೆ ಕಾಗೇರಿ, ‘ಕೈವಾರಕ್ಕೆ ಹೋದರೆ ಪ್ರೇರಣೆ, ಆಧ್ಯಾತ್ಮಿಕ ಭಾವನೆ ಮೂಡುತ್ತದೆ. ನಮ್ಮ ಸನಾತನ ಹಿಂದೂ ಧರ್ಮದ ಪ್ರತಿನಿಧಿಗಳು ಸೃಷ್ಟಿಯ ಅರಿವಿಗಾಗಿ ಜೀವನ ಸಮರ್ಪಿಸಿಕೊಂಡರು. ಭಕ್ತಿ ಮಾರ್ಗದಿಂದ ಸೃಷ್ಟಿಯ ಸತ್ಯ ತಿಳಿಯಲು ಸಾಧ್ಯ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್, ‘ಕೈವಾರ ತಾತಯ್ಯ ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು–ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದರು. ಅವರ ಆದರ್ಶಗಳನ್ನು ಜನರಿಗೆ ತಲುಪಿಸಬೇಕು. ಮುಂದಿನ ವರ್ಷ ಇನ್ನಷ್ಟು ವಿಜೃಂಭಣೆಯಿಂದ ಅವರ ಜಯಂತಿಯನ್ನು ಆಚರಿಸಲಾಗುವುದು’ ಎಂದು ಹೇಳಿದರು.

₹ 50 ಕೋಟಿ ಮೀಸಲಿಡಿ: ಸಂಸದಪಿ.ಸಿ. ಮೋಹನ್, ‘ಕೋಲಾರ ಮತ್ತು ಚಿಕ್ಕಬಳ್ಳಾಪುರದ ಜನರಿಗೆ ಪರಿಚಿತರಾಗಿದ್ದಕಾಲಜ್ಞಾನಿ ತಾತಯ್ಯ ಅವರು ಜಯಂತಿ ಆಚರಣೆಯಿಂದ ಇಡೀ ರಾಜ್ಯಕ್ಕೆ ಪರಿಚಿತರಾದರು.ಬಲಿಜ ಜನಾಂಗದ ಸ್ಥಿತಿಗತಿಗಳನ್ನು ಬಿ.ಎಸ್‌.ಯಡಿಯೂರಪ್ಪ ಅವರು ಪರಿಶೀಲಿಸಿ, ಶಿಕ್ಷಣಕ್ಕೆ ಸೀಮಿತವಾಗಿ ಪ್ರವರ್ಗ 2 ಎ ಅಡಿ ಮೀಸಲಾತಿ ಕಲ್ಪಿಸಿದ್ದರು. ಅದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲ ಆಗಿದೆ. 2 ಎ ಮೀಸಲಾತಿ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಬೇಕು. ಸರ್ಕಾರವು ಬಲಿಜ ಭವನ ನಿರ್ಮಾಣಕ್ಕೆ ₹ 50 ಕೋಟಿ ಮೀಸಲಿಡಬೇಕು. ಕೈವಾರದಲ್ಲಿ 10 ಎಕರೆ ಜಾಗದಲ್ಲಿತಾತಯ್ಯ ಅವರ ಅಧ್ಯಯನಪೀಠ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡಸಿ.ಎಸ್. ದ್ವಾರಕನಾಥ್, ‘ತಾತಯ್ಯ ಅವರು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಜನರ ಕಣ್ಣು ತೆರೆಸುವಂತಹ ಪದ್ಯಗಳನ್ನು ಬರೆದಿದ್ದಾರೆ. ಶರಣ, ದಾಸ ಮತ್ತು ಸೂಫಿ ಪರಂಪರೆಗಳಿಗೆ ಕೊಂಡಿಯಾಗಿ ಕೆಲಸ ಮಾಡಿದ್ದಾರೆ. ಅವರ ಕುರಿತು ಎಲ್ಲರೂ ತಿಳಿದುಕೊಳ್ಳಬೇಕು’ ಎಂದರು.

ತವರು ಜಿಲ್ಲೆಯಲ್ಲಿ ಅದ್ದೂರಿ ಆಚರಣೆ

ಚಿಕ್ಕಬಳ್ಳಾಪುರ: ಯೋಗಿ ನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ ನಗರದಲ್ಲಿ ಭಾನುವಾರ ಬಲಿಜ ಸಮುದಾಯದ ಸಹಕಾರದಲ್ಲಿ ಅದ್ದೂರಿಯಾಗಿ ನಡೆಯಿತು.

ರಾಜ್ಯ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿರುವ ತಾತಯ್ಯನವರ ಮೊದಲ ಜಯಂತಿ ಇದು. ಬಲಿಜ ಸಮಾಜಕ್ಕೆ ಚಿಕ್ಕಬಳ್ಳಾಪುರ ಪ್ರಧಾನ ನೆಲೆ ಎನಿಸಿದೆ. ಜಿಲ್ಲೆಯಲ್ಲಿ ಈ ಸಮುದಾಯ ಗಣನೀಯವಾಗಿದೆ. ಯೋಗಿ ನಾರೇಯಣರ ತ‍ಪೋಕ್ಷೇತ್ರಕೈವಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿದೆ. ಹೀಗಾಗಿ, ಜಯಂತಿ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಕೋಲಾರ, ತುಮಕೂರು, ನೆರೆಯ ಆಂಧ್ರಪ್ರದೇಶದಿಂದಲೂ ಕೈವಾರ ತಾತಯ್ಯ ಅವರ ಭಕ್ತರು ಜಯಂತಿಯಲ್ಲಿ ಭಾಗಿಯಾಗಿದ್ದರು. ವಿವಿಧ ಹಳ್ಳಿಗಳಿಂದ ಯತೀಂದ್ರರ ಭಾವಚಿತ್ರ ಒಳಗೊಂಡ ಪಲ್ಲಕ್ಕಿಗಳು ನಗರದ ಕೈವಾರ ತಾತಯ್ಯ ದೇಗುಲದ ಬಳಿ ಬಂದವು.

ಅಪಾರ ಸಂಖ್ಯೆಯ ಭಕ್ತರು, ಪಲ್ಲಕ್ಕಿಗಳು ಮತ್ತು ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಭಜನಾ ತಂಡಗಳು ಕೈವಾರ ತಾತಯ್ಯ ಅವರ ತತ್ವಪದ, ಕೀರ್ತನೆ ಹಾಡಿದವು.

ಬಲಿಜ ಸಮುದಾಯವನ್ನು ‘2ಎ’ಗೆ ಸೇರಿಸಬೇಕು. ಚಿಕ್ಕಬಳ್ಳಾಪುರದಲ್ಲಿ ಬಲಿಜ ಭವನ ನಿರ್ಮಿಸಲು ಎರಡು ಎಕರೆ ಜಮೀನು ನೀಡಬೇಕು. ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಸಹಕರಿಸಬೇಕು. ಶಿಡ್ಲಘಟ್ಟ ತಾಲ್ಲೂಕು ಜಂಗಮ ಕೋಟೆಯಲ್ಲಿ ನಿರ್ಮಾಣ ಆಗುತ್ತಿರುವ ಬೆಂಗಳೂರು ಉತ್ತರ ವಿ.ವಿ ಕ್ಯಾಂಪಸ್‌ನಲ್ಲಿ ಕೈವಾರ ತಾತಯ್ಯ ಅಧ್ಯಯನ ಪೀಠ ಸ್ಥಾಪಿಸಬೇಕು ಸರ್ಕಾರಕ್ಕೆ ಒತ್ತಾಯಿಸುವ ಮನವಿಯನ್ನು ಸಚಿವರಾದಎಂ.ಟಿ.ಬಿ.ನಾಗರಾಜು, ಡಾ.ಕೆ.ಸುಧಾಕರ್ ಅವರಿಗೆ ಸಲ್ಲಿಸಲಾಯಿತು.

‘ಸರ್ಕಾರದಿಂದ ಜಯಂತಿ ಆಚರಿಸುತ್ತಿರುವುದು ಸಮುದಾಯಕ್ಕೆ ಸಂತೋಷವಾಗಿದೆ’ ಕೈವಾರ ಯೋಗಿ ನಾರೇಯಣ ಮಠದ ಧರ್ಮಾಧಿಕಾರಿ ಎಂ.ಆರ್.ಜಯರಾಂ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.