ಕೆ.ಆರ್.ಪುರ: ಹದಗೆಟ್ಟ ರಸ್ತೆಯ ಅಭಿವೃದ್ಧಿ ಮತ್ತು ಸಮರ್ಪಕ ಚರಂಡಿ ನಿರ್ಮಿಸಲು ಒತ್ತಾಯಿಸಿ ಕಲ್ಕೆರೆ ನಿವಾಸಿಗಳು ಖಾನೆ ರಸ್ತೆಯಲ್ಲಿ, ರಸ್ತೆ ಗುಂಡಿಗಳ ಮಧ್ಯೆ ನಿಂತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಖಾನೆ ರಸ್ತೆಯು ಕೆಲ ವರ್ಷಗಳಿಂದ ಹದಗೆಟ್ಟಿದೆ. ದಿನನಿತ್ಯ ಸಂಚಾರಕ್ಕೆ ಅಡಚಣೆಯಾಗಿ ಸಾರ್ವಜನಿಕರು ತೊಂದರೆಯಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಓಂ ಶಕ್ತಿ ಬಡಾವಣೆ, ಬಂಜಾರ ಬಡಾವಣೆ, ಕನಕಗಿರಿ ಬಡಾವಣೆ ಹಾಗೂ ಇನ್ನಿತರ ಬಡಾವಣೆಗಳ ಸುಮಾರು 2 ಕಿ.ಮೀ ದೂರದಿಂದ ಚರಂಡಿ ನೀರು, ರಸ್ತೆಗೆ ಬರುತ್ತದೆ ಎಂದು ದೂರಿದರು.
ಖಾನೆ ರಸ್ತೆಯಿಂದ ಗೌಡ್ರ ಪಿಳ್ಳಂಜನಪ್ಪ ಬಡಾವಣೆ ಹಾಗೂ ಸುತ್ತಲಿನ ಬಡಾವಣೆಯ ಮನೆಗಳಿಗೆ ಚರಂಡಿ ನೀರು ಹರಿಯುವುದರಿಂದ ದುರ್ವಾಸನೆ ಮತ್ತು ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಪ್ರಯೋಜನ ಆಗುತ್ತಿಲ್ಲ ಗೌಡ್ರ ಪಿಳ್ಳಂಜನಪ್ಪ ಬಡಾವಣೆ ನಿವಾಸಿ ದೇವರಾಜ್ ಆಕ್ರೋಶ ಹೊರಹಾಕಿದರು.
ಮಳೆ ಬಂದಾಗ ಬಡಾವಣೆಯ ಹಲವು ಮನೆಗಳಿಗೆ ಮಳೆ ನೀರಿನ ಜೊತೆಗೆ ಚರಂಡಿ ನೀರು ನುಗ್ಗುತ್ತದೆ. ಇದರಿಂದ ಮನೆಗಳಲ್ಲಿನ ಬೆಲೆ ಬಾಳುವ ಪೀಠೋಪಕರಣಗಳು ಎಲೆಕ್ಟ್ರಾನಿಕ್ ವಸ್ತುಗಳು ನೀರು ಪಾಲಾಗುವುದು ಸಾಮಾನ್ಯವಾಗಿದೆ. ಆದಷ್ಟು ಬೇಗ ರಸ್ತೆ ಅಭಿವೃದ್ಧಿ ಮತ್ತು ಚರಂಡಿ ನಿರ್ಮಾಣ ಮಾಡುವಂತೆ ಸ್ಥಳೀಯ ನಿವಾಸಿ ಶೋಭಾ ಆಗ್ರಹಿಸಿದರು.
ಸಮಸ್ಯೆಗಳನ್ನು ಪರಿಹರಿಸುವಂತೆ ಬಿಬಿಎಂಪಿ ಎಇಇ ಅರ್ಪಿತಾ ಅವರಿಗೆ ಮನವಿ ಮಾಡಿದರೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಪರಿಶೀಲಿಸಲೂ ಸ್ಥಳಕ್ಕೆ ಬರುತ್ತಿಲ್ಲ. ಕುಂಟುನೆಪ ಹೇಳುತ್ತಿದ್ದಾರೆ. ಸಮಸ್ಯೆ ಬಗೆಹರಿಸದಿದ್ದರೆ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸ್ಥಳೀಯ ಮುಖಂಡ ಕಲ್ಕೆರೆ ಶ್ರೀನಿವಾಸ್ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.